ಬೆಂಗಳೂರು : ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ನೂಕು ನುಗ್ಗಲು ಮಾಡಿ ಬ್ಯಾಗ್ ಹಾಗೂ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನ ಎಗರಿಸುತ್ತಿದ್ದ ಇಬ್ಬರು ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ. ಸೂರ್ಯ ಮತ್ತು ಅರ್ಜುನ್ ಎಂಬುವರು ಬಂಧಿತ ಆರೋಪಿಗಳು.
ಬೆಂಗಳೂರು ಸೇರಿದಂತೆ ರಾಮನಗರದಲ್ಲೂ ಕೈಚಳಕ ತೋರಿದ್ದ ಈ ಖದೀಮರು, ಕೊನೆಗೂ ಬ್ಯಾಟರಾಯನಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಈ ಗ್ಯಾಂಗ್ ಒಮ್ಮೆ ಬಸ್ ಹತ್ತಿದ್ದರೆ ಮುಗಿಯಿತು. ಖಾಲಿ ಕೈಯಲ್ಲಿ ವಾಪಸ್ ಬರ್ತಾನೆ ಇರಲಿಲ್ಲ. ಬ್ಯಾಗ್ ಹಾಗೂ ಮಹಿಳೆಯರ ಕತ್ತಲ್ಲಿದ್ದ ಚಿನ್ನ ಎಗರಿಸಿಯೇ ಕೆಳಗಿಳಿಯುತ್ತಿದ್ದರು.
ಆಗಸ್ಟ್ 10ರಂದು ಮೆಜೆಸ್ಟಿಕ್‌ನಿಂದ ಆರ್‌ಆರ್‌ನಗರ ಕಡೆ ಮಹಿಳೆಯೊಬ್ಬಳು ಬಿಎಂಟಿಸಿ ಬಸ್ ಹತ್ತಿದ್ದರು. ಜನಸಂದಣಿ ಇರುವ ಕಾರಣ ನೂಕು ನುಗ್ಗಲು ಮಧ್ಯೆ ಕೆಳಗಿಳಿದಿದ್ದಾಳೆ.
ಕೆಳಗಿಳಿದು ವ್ಯಾನಿಟಿ ಬ್ಯಾಗ್ ನೋಡಿಕೊಳ್ಳುತ್ತಿದ್ದಂತೆ ಶಾಕ್ ಆಗಿದ್ದರು. ಯಾಕೆಂದರೆ, ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಮಾಯವಾಗಿತ್ತು. ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ರಾಮನಗರ, ತಮಿಳುನಾಡು ಸೇರಿದಂತೆ ಹಲವೆಡೆ ಸುತ್ತಾಡಿ ತಲೆಮರೆಸಿಕೊಳ್ಳಲು ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ.
ಸೂರ್ಯ ಮತ್ತು ಅರ್ಜುನ್ ಈ ಇಬ್ಬರ ಬಂಧನದಿಂದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 2 ಕನ್ನ, 2 ಮನೆಗಳವು, 4 ದ್ವಿಚಕ್ರ ವಾಹನ ಕಳವು, 2 ಸಾಮಾನ್ಯ ಕಳವು ಸೇರಿದಂತೆ ಒಟ್ಟು 10 ಪ್ರಕರಣ ಬೆಳಕಿಗೆ ಬಂದಿವೆ.
ಬಂಧಿತರಿಂದ 23.50 ಲಕ್ಷ ಮೌಲ್ಯದ 437 ಗ್ರಾಂ ಚಿನ್ನ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.