ಬೆಂಗಳೂರು: ಕುಡಿದ ನಶೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡಿ ನಂತರ ಆಕೆಯನ್ನು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ರಾಮ್ ಬಹದ್ದೂರ್ ಬಂಧಿತ ಆರೋಪಿ. ಧೂಪಿದೇವಿ ಕೊಲೆಯಾದ ಮಹಿಳೆಯಾಗಿದ್ದಾರೆ. ದಂಪತಿ ಮೂಲತಃ ನೇಪಾಳದವರಾಗಿದ್ದು, ಎರಡು ವರ್ಷಗಳ ಹಿಂದೆ ನಗರದ ಹೊರಮಾವಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ರಾಮ್ ಬಹದ್ದೂರ್ ಐಸ್ ಕ್ರೀಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ ಇಬ್ಬರು ಗಂಡು-ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬ ಅನ್ಯೋನ್ಯವಾಗಿತ್ತು.
ಓದಿ: ಮೈಸೂರಿನಲ್ಲಿ ಒಂದೇ ಒಂದು ಬ್ರಿಟನ್‌ನ ರೂಪಾಂತರ ವೈರಸ್ ಪ್ರಕರಣ ಇಲ್ಲ.. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಈ ನಡುವೆ ಕುಡಿತದ ಚಟ ಬೆಳೆಸಿಕೊಂಡಿದ್ದ ರಾಮ್, ಪ್ರತಿದಿನ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನಂತೆ. ಹೀಗಾಗಿ ಇವರಿಬ್ಬರ ನಡುವೆ ಈ ವಿಚಾರಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ನಿನ್ನೆ ರಾತ್ರಿ ಕುಡಿದು ಬಂದಿದ್ದ ಗಂಡನನ್ನು ಹೆಂಡತಿ ಪ್ರಶ್ನಿಸಿದ್ದಾಳೆ. ಇದಕ್ಕೆ ಕಿಡಿಕಾರಿ, ಹೆಂಡತಿ ಮೇಲೆ ಮುಗಿಬಿದ್ದಿದ್ದಾನೆ. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಚಾಕುವಿನಿಂದ ಹೆಂಡತಿಯ ಕತ್ತು ಸೀಳಿದ್ದಾನೆ. ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ.
ವಿಷಯ ಆಧರಿಸಿ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.