ಬೆಂಗಳೂರು: ಕುಟುಂಬಸ್ಥರನ್ನು ಮಾತಾಡಿಸಿ ಕರ್ತವ್ಯಕ್ಕೆಂದು ತೆರೆಳುತ್ತಿದ್ದ ಪೇದೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಪೇದೆಯ ಆರೋಗ್ಯ ವಿಚಾರಿಸಿದರು.
ಫೀರ್ ಖಾನ್ ಗಂಭೀರವಾಗಿ ಗಾಯಗೊಂಡಿರುವ ಸದಾಶಿವ ನಗರ ಪೊಲೀಸ್ ಠಾಣೆಯ ಪೇದೆ. ನಿನ್ನೆ ರಾತ್ರಿ ಕೆಲಸಕ್ಕಾಗಿ ಬೈಕ್ನಲ್ಲಿ ಬರುವಾಗ ಮಾರ್ಗ ಮಧ್ಯೆ ತಲೆಸುತ್ತಿದಂತಾಗಿ ಇದಕ್ಕಿದ್ದಂತೆ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಫೀರ್ ಖಾನ್ ಅವರನ್ನು ಗೋರಗುಂಟೆ ಪಾಳ್ಯದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೇದೆ ಫೀರ್ ಖಾನ್ ಆರೋಗ್ಯ ಕುರಿತು ಮಾಹಿತಿ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ನಾವು ಜನರಿಗೆ ಹೆಲ್ಮೆಟ್ ಹಾಕಿ ಸುರಕ್ಷತೆ ಕಡೆ ಹೆಚ್ಚು ಗಮನ ಹರಿಸಲು ಎಚ್ಚರಿಕೆ ನೀಡುತ್ತೇವೆ. ಪೂರ್ಣ ಪ್ರಮಾಣದಲ್ಲಿ ತಲೆ ಮುಚ್ಚುವಂತಹ ಹೆಲ್ಮೆಟ್ ಧರಿಸಿ ಎಂದು ಹೇಳಿದ್ರೂ ಕೆಲವರು ಟೋಪಿ ರೀತಿಯ ಹೆಲ್ಮೆಟ್ ಧರಿಸುತ್ತಾರೆ. ಅದರಲ್ಲಿ ಸುರಕ್ಷತೆ ಇರೋದಿಲ್ಲ. ನಮ್ಮ ಪೀರ್ ಖಾನ್ ಸಹ ಅಂತದ್ದೇ ಟೋಪಿ ಹೆಲ್ಮೆಟ್ ಧರಿಸಿದ್ದರಿಂದ ಈ ಅನಾಹುತವಾಗಿದೆ ಎಂದರು.
ಪೇದೆಯ ತಾಯಿ ಹಾಗೂ ಸಂಬಂಧಿಕರನ್ನ ಭೇಟಿಯಾಗಿ ಕೆಲಸಕ್ಕೆ ಬರುತ್ತಿದ್ದ ವೇಳೆ ಅಪಘಾತವಾಗಿದೆ. ಹೆಲ್ಮೆಟ್ ಉತ್ತಮ ಗುಣಮಟ್ಟದ್ದಾಗಿದ್ರೆ ಅನಾಹುತ ತಡೆಯಬಹುದ್ದಿತ್ತೇನೋ, ಸದ್ಯ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಬೇಗ ಗುಣಮುಖರಾಗಲಿ ಅನ್ನೋದು ನಮ್ಮ ಆಶಯ ಎಂದರು.