ಬೆಂಗಳೂರು: ಮೊನ್ನೆಯಷ್ಟೇ ಬಸವನಗುಡಿಯಲ್ಲಿ ಕೋತಿಗಳಿಗೆ ವಿಷ ಹಾಕಿ ಕೊಂದ ಪ್ರಕರಣ ಮಾಸುವ ಮುನ್ನವೇ, ಬೀದಿನಾಯಿಗಳಿಗೆ ವಿಷ ಹಾಕಿರುವ ಘಟನೆ ಜೆಪಿ ನಗರದ ಎಂಎಸ್ ರಾಮಯ್ಯ ಸಿಟಿಯಲ್ಲಿ ನಡೆದಿದೆ.
ವಿಷ ಸೇವಿಸಿದ ಬಳಿಕ ಸ್ಥಳದಲ್ಲೇ 7 ಶ್ವಾನಗಳು ಅಸುನೀಗಿದ್ದು, 4 ಶ್ವಾನಗಳಿಗೆ ಸ್ಥಳೀಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಆ 4 ಶ್ವಾನಗಳ ಪರಿಸ್ಥಿತಿ ನಿಜಕ್ಕೂ ಮನಕಲುವಂತಿದೆ.
ಬೀದಿ ನಾಯಿಗಳಿಗೆ ವಿಷ ಹಾಕಿರುವ ವಿಚಾರ ಇನ್ನು ನಮ್ಮ ಗಮನಕ್ಕೆ ಬಂದಿಲ್ಲ. ವಿಷ ಹಾಕಿರುವುದು ಸಾಬೀತಾದರೆ ಎಫ್ಐಆರ್ ದಾಖಲಿಸಿ, ಅದು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಪಾಲಿಕೆ ಆಯುಕ್ತರಾದ ಬಿ. ಹೆಚ್ ಅನಿಲ್ ಕುಮಾರ್ ಮಾತನಾಡಿ, ಎಲ್ಲಾ ಝೋನ್ಗಳಲ್ಲೂ ಎನ್ಜಿಒ ಮೂಲಕ ಎಬಿಸಿ ಚಿಕಿತ್ಸೆ ನೀಡಲಾಗ್ತಿದೆ. ಬೀದಿನಾಯಿಗಳಿಗೆ ವಿಷ ಹಾಕಿರುವ ಪ್ರಕರಣ ಖಂಡನೀಯ. ಅದೇ ಪ್ರದೇಶದ ಸ್ಥಳೀಯರೇ ಈ ರೀತಿ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.