ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಕಾವು ರಂಗೇರಿದೆ. ರಾಜ್ಯದಲ್ಲಿ ರಾಜಕೀಯ ಚುಟುವಟಿಕೆಗಳು ಕೂಡಾ ತೀವ್ರ ಚುರುಕುಗೊಂಡಿದೆ. ಘಟಾನುಗಟಿ ನಾಯಕರಿಂದ ಅಬ್ಬರದ ಪ್ರಚಾರ ಆರಂಭವಾಗಿದೆ. ಇದರ ಬೆನ್ನೆಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಆರು ದಿನಗಳಲ್ಲಿ ಸುಮಾರು 15 ಸಾರ್ವಜನಿಕ ಸಭೆಗಳು ಹಾಗೂ ರೋಡ್ ಶೋಗಳನ್ನು ನಡೆಸಲಿದ್ದಾರೆ. ಹೌದು, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಷದ ಪ್ರಯತ್ನಗಳಿಗೆ ಇನ್ನಷ್ಟು ಬಲ ತುಂಬಲು ಉತ್ತೇಜನಕಾರಿಯಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಹೀಗಾಗಿಯೇ ಪ್ರಧಾನಿ ಅವರು ಏಪ್ರಿಲ್ 28 ರಂದು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಮೇ 7 ರವರೆಗೆ ಕೂಡಾ ಮೋದಿ ನೇತೃತ್ವದಲ್ಲಿ ಭರ್ಜರಿ ಮತ ಬೇಟೆ ಮುಂದುವರಿಯಲಿದೆ.
ಕರ್ನಾಟಕ ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು: ಕರ್ನಾಟಕವನ್ನು ಬಿಜೆಪಿಯ "ದಕ್ಷಿಣದ ಹೆಬ್ಬಾಗಿಲು" ಎಂದು ಬಣ್ಣಿಸಲಾಗುತ್ತದೆ. ಬಿಜೆಪಿ ಪಕ್ಷವು ಯಾವುದೇ ಕ್ಷೇತ್ರವನ್ನೂ ಬಿಟ್ಟುಕೊಡಲು ಸಿದ್ಧವಿಲ್ಲ. ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಉನ್ನತ ನಾಯಕರು ದೇಶಾದ್ಯಂತ ಆಕ್ರಮಣಕಾರಿಯಾಗಿ ಪ್ರಚಾರ ಕೈಗೊಂಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಚುನಾವಣೆಯಲ್ಲಿ ಆರು ದಿನಗಳಲ್ಲಿ ಸುಮಾರು 15 ಸಾರ್ವಜನಿಕ ಸಭೆ, ರ‍್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಏಪ್ರಿಲ್ 28, ಏಪ್ರಿಲ್ 29, ಮೇ 3, ಮೇ 4, ಮೇ 6 ಮತ್ತು ಮೇ 7 ರಂದು ಬಿರುಸಿನ ಪ್ರಚಾರ ನಡೆಸಲಿದ್ದಾರೆ'' ಎಂದು ಮೂಲಗಳು ಹೇಳಿವೆ.
ಕರುನಾಡಲ್ಲಿ ಕಮಾಲ್ ಮಾಡಲಿರುವ ಮೋದಿ: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಇರುವ ಸವಾಲು ಅಂದ್ರೆ, ಅಧಿಕಾರವನ್ನು ಉಳಿಸಿಕೊಳ್ಳುವುದು. ಅದಕ್ಕಾಗಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಈಗಾಗಲೇ ಅಬ್ಬರ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಸುಮಾರು ಒಂದು ವಾರದ ನಂತರ ಕೋವಿಡ್‌ನಿಂದ ಚೇತರಿಸಿಕೊಂಡಿರುವ ರಾಜನಾಥ್ ಸಿಂಗ್ ಅವರು ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಮೋದಿ ಅವರ ಕಾರ್ಯಕ್ರಮದ ಬಗ್ಗೆ ಭಾರತೀಯ ಜನತಾ ಪಕ್ಷವು ಉತ್ಸುಕವಾಗಿದೆ. ಏಕೆಂದರೆ ಪ್ರಧಾನಿ ಆಗಮನವು ಬಿಜೆಪಿಯ ಪರವಾಗಿ ವಾತಾವರಣ ಸೃಷ್ಟಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕ ಚುನಾವಣೆಯನ್ನು 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತಿದೆ. ಅದಕ್ಕಾಗಿಯೇ ಬಿಜೆಪಿ ಇತರ ರಾಜ್ಯಗಳಿಗಿಂತ ಕರ್ನಾಟಕದ ಮೇಲೆ ಅತೀ ಹೆಚ್ಚು ಗಮನ ಹರಿಸುತ್ತದೆ. ಬಿಜೆಪಿ ರಾಜ್ಯದಲ್ಲಿ ಎರಡನೇ ಅವಧಿಗಾಗಿ ಅಧಿಕಾರದ ಗದ್ದುಗೆ ಏರಿಲು ಪ್ರಯತ್ನಿಸುತ್ತಿದೆ. ಜೊತೆಗೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಹ್ಲಾದ್ ಜೋಶಿ ಹೇಳಿದ್ದೇನು?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ''ಪ್ರಧಾನಿ ಮೋದಿ ಬೆಳಗಾವಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ಅವರು ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯ ಚಿಕ್ಕೋಡಿ, ಕಿತ್ತೂರು ಮತ್ತು ಕುಡಚಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯವರು ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಲಿಂಗಾಯತರ ಮತ ಸೆಳೆಯಲು ಬಿಎಸ್ವೈ ಪ್ಲಾನ್: ವೀರಶೈವ ಸಮಾಜದ ಸ್ನೇಹಮಿಲನ