ಬೆಂಗಳೂರು: ಕಳ್ಳತನ ಮಾಡುವ ಎಲ್ಲರೂ ಚಾಲಾಕಿಗಳೇ ಆಗಿರುತ್ತಾರೆ. ಆದರೆ ಇಲ್ಲೊಬ್ಬ ಖದೀಮ ತದ್ವಿರುದ್ಧವಾಗಿದ್ದಾನೆ. ಕೊಳಾಯಿ (ಪೈಪು) ಕದಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಈತ ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಕದ್ದು ಏನು ಮಾಡಬೇಕೆಂದು ತಿಳಿಯದೇ ಗುಜರಿಗೆ ಹಾಕಿದ್ದಾನೆ. ಹೌದು, ಪಶ್ಚಿಮ ಬಂಗಾಳ ಮೂಲದ ಸುಬ್ರತೊ ಮಂಡಲ್ ಎಂಬಾತ ಚಿನ್ನ ಕದ್ದು ಗುಜರಿಗೆ ಹಾಕಿರುವ ಆರೋಪಿ.
ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ ಏನು ಕೆಲಸ ಮಾಡದೆ ಕೊಳಾಯಿಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದನು. ಸುಮಾರು 25ಕ್ಕೂ ಹೆಚ್ಚು ನಲ್ಲಿಗಳನ್ನು ಕದ್ದು ಗುಜರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಶೋಕಿ ಮಾಡುತ್ತಿದ್ದನು. ಹೀಗೆ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಸುಬ್ರತೊ ಹೆಚ್ಚಿನ ಹಣ ಸಂಪಾದನೆಗಾಗಿ ಮನೆಗಳ್ಳತನ ಮಾಡಲು ತೀರ್ಮಾನಿಸಿದ್ದನು.
ಇದರಂತೆ ಸಂಚು ರೂಪಿಸಿದ್ದ ಸುಬ್ರತೊ, ಮಾರ್ಚ್ 11 ರಂದು ಮತ್ತಿಕೆರೆಯ ಎಚ್ಎಂಟಿ ಲೇಔಟ್ನಲ್ಲಿರುವ ನಿಜೇಶ್ ಎಂಬುವರ ಮನೆಗೆ ಕನ್ನ ಹಾಕಲು ಮುಂದಾಗಿದ್ದ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತು ಒಳನುಗ್ಗಿ ಸುಮಾರು 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಕದ್ದಿದ್ದಾನೆ. ಕದ್ದ ಚಿನ್ನವನ್ನು ಎಲ್ಲಿ ಮಾರಾಟ ಮಾಡಬೇಕೆಂದು ತಿಳಿಯದೆ, ಕೊನೆಗೆ ಗುಜರಿಗೆ ಹಾಕಿ 30 ಸಾವಿರ ರೂಪಾಯಿ ಪಡೆದಿದ್ದಾನೆ. ಕಳ್ಳತನ ಮಾಡಿರುವ ಮನೆ ಮಾಲೀಕ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ನೋಡಿ: ದೇವಸ್ಥಾನದ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಕಳ್ಳರು: ಸಿಸಿಟಿವಿ ದೃಶ್ಯ