ಬೆಂಗಳೂರು: ಪ್ಲಾಸ್ಟಿಕ್ ನಿಷೇಧ ಆಂದೋಲನಾ ಕಾರ್ಯಕ್ರಮಕ್ಕೆ ಮೇಯರ್ ಚಾಲನೆ ನೀಡಿದ್ದು, ಈ ಸಂಬಂಧ ಕಾರ್ಯಾಚರಣೆ ಮುಂದುವರಿದಿದ್ದು, ಪ್ಲಾಸ್ಟಿಕ್ ಜಪ್ತಿ ಮಾಡುವ ಜತೆಗೆ ದುಪ್ಪಟ್ಟು ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೆ ತಂದು ಇಂದು ಎರಡನೇ ದಿನವಾಗಿದ್ದು, ನಗರದ ಎಂಟೂ ವಲಯಗಳ ಪ್ರಮುಖ ಸ್ಥಳಗಳಲ್ಲಿರುವ ಸಗಟು ವ್ಯಾಪಾರ ಮಳಿಗೆಗಳು, ಅಂಗಡಿಗಳ ಮೇಲೆ ಪಾಲಿಕೆ ಆರೋಗ್ಯಾಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿ ಪ್ಲಾಸ್ಟಿಕ್ ಕೈ ಚೀಲ, ಪ್ಲಾಸ್ಟಿಕ್ ಚಮಚ, ತಟ್ಟೆ, ಪಾಲಿಥೀನ್ ಬ್ಯಾಗ್ ಸೇರಿದಂತೆ ವಿವಿಧ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಕ್ಕೆ ಪಡೆದುಕೊಂಡರು ಜತೆಗೆ ಈ ಉತ್ಪನ್ನ ಮಾರಾಟ ಮಾಡುತ್ತಿದ್ದ 559 ಮಳಿಗೆಗಳು, 439 ಬೀದಿಬದಿ ವ್ಯಾಪಾರಿ ಅಂಗಡಿಗಳು ಸೇರಿ ಒಟ್ಟು 1,335 ಕೆ.ಜಿ ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 4.36 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ವ್ಯಾಪಾರ ಮಳಿಗೆ, ಅಂಗಡಿಗಳಿಗೆ ನೋಟೀಸ್ ನೀಡಿ ಇನ್ಮುಂದೆ ಪ್ಲಾಸ್ಟಿಕ್ ಬದಲು ಬಟ್ಟೆ ಹಾಗೂ ಪೇಪರ್ ಬ್ಯಾಗ್ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ದಕ್ಷಿಣ ವಲಯದಲ್ಲಿ ಶ್ರೀನಗರ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ಕೋರಮಂಗಲ ಕ್ಲಬ್ ರಸ್ತೆ, ಮಡಿವಾಳ ಸಂತೆ, ಜಯನಗರ 2ನೇ ಬ್ಲಾಕ್ ಹಾಗೂ 8, 9ನೇ ಮುಖ್ಯ ರಸ್ತೆಗಳ ಸುತ್ತಮುತ್ತಲಿನ ಮಳಿಗೆಗಳಲ್ಲಿ ದಾಳಿ ನಡೆಸಿದ್ದಾರೆ.