ಬೆಂಗಳೂರು: ಉಚಿತ ಯೋಜನೆಗಳು ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಪುಕ್ಕಟ್ಟೆಯಾಗಿ ನೀಡಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕೇಂದ್ರದ 2022-24ರ 'ಅಮೃತ ಕಾಲ ಬಜೆಟ್' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಪುಕ್ಕಟ್ಟೆಯಾಗಿ ನೀಡಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಈ ಕಾರಣದಿಂದ ಬಿಜೆಪಿ ಸರ್ಕಾರ ಜನರನ್ನು ಸುಸ್ಥಿರಗೊಳಿಸುವ ಯೋಜನೆಗಳ ಕಡೆ ಗಮನ ಹರಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 9 ವರ್ಷದಿಂದ ಮಂಡಿಸುತ್ತಿರುವ ಆಯ್ಯವ್ಯಯದಲ್ಲಿ ಜನರಿಗೆ ಉಚಿತ ಯೋಜನೆಗಳನ್ನು ನೀಡುವ ಬದಲು ನಾಗರಿಕರನ್ನು ಶಸಕ್ತಗೊಳಿಸುವ, ಉದ್ಯೋಗ ಸೃಷ್ಟಿಸುವ, ಜೀವನ ಗುಣಮಟ್ಟ ಹೆಚ್ಚಿಸುವ ಯೋಜನೆಗಳನ್ನು ನೀಡುತ್ತಾ ಬಂದಿದೆ. ಉಚಿತ ಯೋಜನೆಗಳು ವ್ಯವಸ್ಥೆ ಅಸ್ಥಿರಗೊಳಿಸಲಿದೆ. ಹಾಗಾಗಿ, ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡದೇ ಕೇವಲ ಒಂದು ರೂ.ಗೆ ನೀಡಲಾಯಿತು ಎಂದರು.
ಭಾರತದ ಅಮೃತ ಕಾಲದಲ್ಲಿ ಮಂಡಿಸಿದ ಕೇಂದ್ರ ಆಯವ್ಯಯ ಮುಂದಿನ 25 ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಹಾಕಿದ ಬುನಾದಿಯಾಗಿದೆ. ಭಾರತ ವಿಶ್ವದ ಆರ್ಥಿಕತೆಯನ್ನು ಮುನ್ನಡೆಸುವ ನಾವಿಕನಾಗಲಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಫಲಪ್ರದವಾಗುವಂತೆ ವಿಭಿನ್ನ ದೃಷ್ಟಿಕೋನದಲ್ಲಿ ಆಲೋಚಿಸಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಚುನಾವಣೆ ದೃಷ್ಟಿಯಿಂದ ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ. ಕೇಂದ್ರ ಸರ್ಕಾರ 2014ರಿಂದ ಈವರೆಗೆ ರೂಪಿಸಿದ ಯೋಜನೆಗಳು ಒಂದಕ್ಕೊಂದು ಪೂರಕವಾಗಿವೆ. ಜನಧನ್, ಆಧಾರ್ ಕಾರ್ಡ್, ಡಿಜಿಟಲ್ ಇಂಡಿಯಾ ಸೇರಿದಂತೆ ಮೊದಲಾದವುಗಳು ಇದಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ 300ಕ್ಕೂ ಹೆಚ್ಚು ಯೋಜನೆಯ 20 ಲಕ್ಷ ಕೋಟಿ ರು. ಹಣವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಬೆಂಗಳೂರು ದೇಶದ ತಂತ್ರಜ್ಞಾನ ಮತ್ತು ಪ್ರತಿಭಾ ಕೇಂದ್ರವಾಗಿದೆ. ಸ್ಟಾರ್ಟ್ ಆಪ್ ಹಾಗೂ ತಂತ್ರಜ್ಞಾನದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ನಗರವಾಗಿದ್ದು, ಅದನ್ನು ಜಾಗತೀಕ ನಾವಿನ್ಯತಾ ಕೇಂದ್ರವಾಗಿ ಮಾಡಬೇಕಿದೆ. ಸ್ವಾತಂತ್ರ್ಯ ಬಂದು 67 ವರ್ಷ ಕಳೆದಿದ್ದರೂ ಜನಸಂಖ್ಯೆಯ ಶೇ.50 ರಷ್ಟು ಜನರ ಮನೆಯಲ್ಲಿ ಶೌಚಾಲಯ ಇರಲಿಲ್ಲ. 3.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. 2014ರಲ್ಲಿ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 10 ಕೋಟಿ ಬಡಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. ಕಳೆದ ಎರಡು ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಪ್ರಮಾಣ 500 ಮಿಲಿಯನ್ ಡಾಲರ್‌ನಿಂದ 674 ಮಿಲಿಯನ್ ಡಾಲರ್‌ಗೆ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ದಾಖಲೆ ಅನುದಾನ: ಕರ್ನಾಟಕಕ್ಕೆ ದಾಖಲೆಯ 7,561 ಕೋಟಿಗಳ ಅನುದಾನ ಈ ಬಾರಿಯ ಬಜೆಟ್ನಲ್ಲಿ ನೀಡಲಾಗಿದೆ. ರೈಲ್ವೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಜೆಟ್ನಲ್ಲಿ ಮಂಡನೆ ಆಗಿದ್ದು, 10 ರೈಲ್ವೆ ಮಾರ್ಗ ಕಾಮಗಾರಿ, 7 ಮಾರ್ಗ ಡಬ್ಲಿಂಗ್ ಮತ್ತು 7 ಮಾರ್ಗಗಳ ವಿದ್ಯುದೀಕರಣಕ್ಕೆ ಹಣ ಒದಗಿಸಲಾಗಿದೆ.
ಇದನ್ನೂ ಓದಿ: ಯುಪಿ ದೊಡ್ಡ ರಾಜ್ಯ, ಅದಕ್ಕೆ ಹೆಚ್ಚು ಅನುದಾನ ನೀಡಲಾಗಿದೆ: ಉಸ್ತುವಾರಿ ಅರುಣ್ ಸಿಂಗ್