ಬೆಂಗಳೂರು: ನದಿಗಾಗಿ ಜಾಥಾ ನಡೆಸುವ ಮೂಲಕ ದೇಶದ ಗಮನ ಸೆಳೆದಿರುವ, ಇಶಾ ಫೌಂಡೇಷನ್ ಅಧ್ಯಕ್ಷ, ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ತಂಡ ಕೈಗೆತ್ತಿಕೊಂಡಿರುವ 'ಕಾವೇರಿ ಕೂಗು' ಯೋಜನೆ ಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ವಕೀಲ ಎ.ವಿ. ಅಮರ್‌ನಾಥ್ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಸಸಿ ನೆಡುವ ಯೋಜನೆ ಕೈಗೊಂಡಿದ್ದಾರೆ. ಈ ಯೋಜನೆಗೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಸಸಿ ಒಂದಕ್ಕೆ 42 ರೂ. ಸಾರ್ವಜನಿಕರಿಂದ ಸಂಗ್ರಹ ಮಾಡಿ, 242 ಕೋಟಿ ಸಸಿ ನೆಡುವ ಯೋಜನೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.
242 ಕೋಟಿ ಸಸಿಗೆ ಒಟ್ಟು 10 ಸಾವಿರ ಕೋಟಿ ಹಣ ಸಂಗ್ರಹವಾಗುತ್ತದೆ. ಪರಿಸರ ಮಾಲಿನ್ಯವನ್ನು ಕಾಪಾಡಲು ಸಸಿಯನ್ನು ನೆಡಲಿ. ಆದರೆ, ಸಸಿ ನೀಡಿ ಹಣ ಸಂಗ್ರಹ ಮಾಡಲು ಹೋರಟಿರುವುದಕ್ಕೆ ನಮ್ಮ ವಿರೋಧವಿದೆ. ಯೋಜನೆಗೆ ಸರ್ಕಾರ ಅನುಮತಿಯನ್ನೂ ನೀಡಿಲ್ಲ. ಹೀಗಾಗಿ, ಕಾವೇರಿ ಕೂಗು ಯೋಜನೆ ಕುರಿತು ಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.