ಬೆಂಗಳೂರು : ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ.
ಈ ಕುರಿತು ಬೆಂಗಳೂರಿನ ವಕೀಲ ಡಾ. ಬಿ ಎನ್ ಲೋಕೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅರ್ಜಿದಾರರ ಕೋರಿಕೆ : ಸಾರ್ವಜನಿಕರು ರಾಜ್ಯದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅಲಂಬಿಸಿದ್ದಾರೆ. ಆದರೆ, ಪ್ರಸ್ತುತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮುಖ್ಯವಾಗಿ ಕಾಲೇಜು ಮತ್ತು ಪರೀಕ್ಷೆಗಳಿಗೆ ಹಾಜರಾಗಲು ಸಾರ್ವಜನಿಕ ವಾಹನಗಳನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಮುಷ್ಕರದಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರು, ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಲೂ ಕಷ್ಟವಾಗುತ್ತಿದೆ. ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರದ ಮುಂದೆ ಸಾರಿಗೆ ನೌಕರರು ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿರುವುದು ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟ ತಂದಿಟ್ಟಿದೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಹಾಗೂ ಮುಷ್ಕರ ತಡೆಯಲು ಸರ್ಕಾರ ವಿಫಲವಾಗಿದೆ. ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಪರಿಸ್ಥಿತಿಯ ಲಾಭ ಪಡೆದು ಖಾಸಗಿ ಬಸ್ ಮಾಲೀಕರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.
ಆದ್ದರಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ಇಲಾಖೆ ನೌಕರರ ಮುಷ್ಕರ ತಡೆಯಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಹಾಗೂ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.