ಬೆಂಗಳೂರು: ಚೆಕ್ ಬೌನ್ಸ್ ಮತ್ತಿತರ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ದಂಡದ ಮೊತ್ತ ಪಾವತಿಸಲು ವಿಫಲರಾಗಿ ಶಿಕ್ಷೆ ಅನುಭವಸುತ್ತಿರುವ ಕೈದಿಗಳಿಗೆ ಪೆರೋಲ್ ನೀಡಲು ಅವಕಾಶ ಇದೆಯೇ, ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜೈಲುಗಳಲ್ಲಿ ಕೈದಿಗಳ ದಟ್ಟಣೆ ತಗ್ಗಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯದಲ್ಲಿ ಪೆರೋಲ್ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರಂತೆ 7 ವರ್ಷಕ್ಕಿಂತ ಕಡಿಮೆ ಶಿಕ್ಷಾರ್ಹ ಅಪರಾಧ ಎಸಗಿದ ಆರೋಪದಡಿ ಬಂಧಿತರಾಗಿರುವ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ನೀಡುವ ಮತ್ತು ಶಿಕ್ಷಾ ಬಂಧಿಗಳಿಗೆ ತಾತ್ಕಾಲಿಕ ಪೆರೋಲ್ ಮಂಜೂರು ಮಾಡಲಾಗುತ್ತಿದೆ.
ಆದರೆ, ತಿದ್ದುಪಡಿಯಲ್ಲಿ ಚೆಕ್ ಬೌನ್ಸ್ ಸೇರಿದಂತೆ ವಿವಿಧ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ದಂಡ ಪಾವತಿಸಲು ವಿಫಲರಾಗಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಮತ್ತು ಸಿಬಿಐ, ಎನ್‌ಐಎ ಮತ್ತು ಇಡಿ ವಿಚಾರಣೆ ಎದುರಿಸುತ್ತಿರುವರಿಗೆ ಪೆರೋಲ್ ನೀಡಲು ತಿದ್ದುಪಡಿ ನಿಯಮಗಳಲ್ಲಿ ಅವಕಾಶ ಕೊಟ್ಟಿಲ್ಲ. ಇಂತಹುದೇ ಶಿಕ್ಷೆ ಅನುಭವಿಸುತ್ತಿರುವ ಅರ್ಜಿದಾರೊಬ್ಬರು ಪೆರೋಲ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಸಲು ಕೋರಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ದಂಡ ಪಾವತಿಸಲು ವಿಫಲರಾಗಿ ಜೈಲು ವಾಸ ಅನುಭವಿಸುತ್ತಿರುವ ಸೈಯದ್ ಶಹತಾಜ್, ಎಂ. ಮಾರುತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಕುರಿತು ಸ್ಪಷ್ಟನೆ ನೀಡುವಂತೆ ನಿರ್ದೇಶನ ನೀಡಿದೆ.