ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಾಹನಗಳ ಮೌಲ್ಯ ಆಧರಿಸಿ ನಾಲ್ಕು ವರ್ಗಗಳಲ್ಲಿ ಟ್ಯಾಕ್ಸಿಗಳನ್ನು ವಿಂಗಡಿಸಿ, ಅದರಂತೆ ದರ ನಿಗದಿ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಮಹಮ್ಮದ್ ದಸ್ತಗೀರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಬಳಿಕ ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರಸ್ತೆ ಪ್ರಾಧಿಕಾರದ ಕಾರ್ಯದರ್ಶಿ, ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಪಿಐಎಲ್ ಸಾರಾಂಶ: ಸಾರಿಗೆ ಇಲಾಖೆ ಮೋಟಾರು ವಾಹನಗಳ ಅಧಿನಿಯಮ-1988ರ ಕಲಂ 67ರ ಉಪ ಕಲಂ 1(ಡಿ) (ಐ) ಅಡಿಯಲ್ಲಿ 2018 ಮಾರ್ಚ್ 4 ರಂದು ಅಧಿಸೂಚನೆ ಹೊರಡಿಸಿ ಟ್ಯಾಕ್ಸಿಗಳನ್ನು ಅವುಗಳ ಮೌಲ್ಯದ ಆಧಾರದ ಮೇರೆಗೆ ನಾಲ್ಕು ವರ್ಗಗಳಲ್ಲಿ ವಿಂಗಡಿಸಿದೆ. ಅವುಗಳನ್ನು ಎ,ಬಿ,ಸಿ ಮತ್ತು ಡಿ ವರ್ಗ ಎಂದು ವಿಂಗಡಿಸಿ ಬೆಂಗಳೂರು ನಗರ ವ್ಯಾಪ್ತಿ ಒಳಗೊಂಡಂತೆ ಬಿಬಿಎಂಪಿ ವ್ಯಾಪ್ತಿಯ 25 ಕಿ.ಮೀ ವರೆಗಿನ ಪರಿಧಿಯಲ್ಲಿ ಕಾರ್ಯಾಚರಿಸಲು ವಿವಿಧ ದರಗಳನ್ನು ನಿಗದಿಪಡಿಸಿದೆ.
ಸರ್ಕಾರವು ವಾಹನಗಳ ಮೌಲ್ಯ ಆಧರಿಸಿ ದರ ನಿಗದಿಪಡಿಸಿರುವ ಅಧಿಸೂಚನೆ ಕಾನೂನು ಬಾಹಿರವಾಗಿದೆ. ಹೀಗಾಗಿ ದರ ನಿಗದಿಯಲ್ಲಿ ಏಕರೂಪತೆ ಇಲ್ಲದ ಅಧಿಸೂಚನೆ ರದ್ದುಪಡಿಸಬೇಕು. ನಗರದ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಎಲ್ಲಾ ಬಗೆಯ ಟ್ಯಾಕ್ಸಿಗಳು ನ್ಯಾಯಸಮ್ಮತ ಮೀಟರ್‌ಗಳನ್ನು ಅಳವಡಿಸಿಕೊಂಡಿರುವುದನ್ನು ಸರ್ಕಾರ ಖಾತರಿಪಡಿಸಬೇಕು. ಅರ್ಜಿಯು ಇತ್ಯರ್ಥಗೊಳ್ಳುವವರೆಗೆ 2018ರ ಮಾ.3ರ ಅಧಿಸೂಚನೆಯಂತೆ ದರ ವಸೂಲಿ ಮಾಡದಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.