ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ತುಮಕೂರಿನ ವಕೀಲ ಎಲ್.ರಮೇಶ್ ನಾಯಕ್ ಈ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ರಾಜ್ಯದಲ್ಲಿ ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಕಾನೂನು, ನಿಯಮಗಳಿವೆ. ಸರ್ಕಾರ ಆಗಾಗ್ಗೆ ಅಧಿಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ, ಶಾಲಾ ಬ್ಯಾಗ್ ಸಂಬಂಧ ಯಾವುದೇ ನಿರ್ದಿಷ್ಟ ನಿಯಮವಿಲ್ಲ. 2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕ ಮಂಡಿಸಲಾಗಿತ್ತು. ಆದರೆ, ನಂತರ ಅದನ್ನು ಅಲ್ಲಿಗೆ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದರ ನಡುವೆ ಕೇಂದ್ರ ಸರ್ಕಾರ ಶಾಲಾ ಬ್ಯಾಗ್ ನೀತಿ 2020ರಲ್ಲಿ ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕೆಂದು ನಿಯಮ ಜಾರಿ ಮಾಡಿದೆ. ಆದರೆ, ಆದು ಪಾಲನೆಯಾಗುತ್ತಿಲ್ಲ. ನಗರ ಹಾಗೂ ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ತೂಕದ ಬ್ಯಾಗ್‌ಗಳನ್ನು ಹೊತ್ತು ಪ್ರತಿದಿನವೂ ಶಾಲೆಗೆ ಹೋಗುವುದು ಸಾಮಾನ್ಯ ದೃಶ್ಯವಾಗಿದೆ. ಇದರಿಂದ ಶಾಲಾ ಬ್ಯಾಗ್ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಜಾತಿ ನಿಂದನೆ ಆರೋಪದಲ್ಲಿ ಸುಳ್ಳು ದೂರು ದಾಖಲಿಸಿದ್ದವರಿಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್