ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ನೌಕರರು ಹಾುಗೂ ಇನ್ನಿತರೆ ಸಿಬ್ಬಂದಿಗೆ ಕೆಲಸದ ಅವಧಿಯಲ್ಲಿ ಟೀ-ಕಾಫಿ ಪೂರೈಸಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತರಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಬಿಬಿಎಂಪಿಯ ಆರೋಗ್ಯ ಮತ್ತು ಕಂದಾಯ ವಿಭಾಗದ ಅಧಿಕಾರಿಗಳು, ಪೌರ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಬಿಬಿಎಂಪಿ ನೌಕರರಷ್ಟೇ ಅಲ್ಲದೆ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಅವರ ಸಿಬ್ಬಂದಿ ವರ್ಗ, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ಶ್ರಮಿಸುತ್ತಿದ್ದು, ನಿತ್ಯವೂ ಮಾನಸಿಕ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಸದ್ಯ ಲಾಕ್‍ಡೌನ್ ಪರಿಣಾಮವಾಗಿ ಹೋಟೆಲ್, ಉಪಹಾರ ಕೇಂದ್ರಗಳು ಮುಚ್ಚಿರುವುದರಿಂದ ಇವರಿಗೆ ಕೆಲಸದ ಅವಧಿಯಲ್ಲಿ ಟೀ ಕಾಫಿ ಸಿಗದಂತಾಗಿದೆ. ಹೀಗಾಗಿ ಇವರೆಲ್ಲರಿಗೂ ಬೆಳಿಗ್ಗೆ ಮತ್ತು ಸಂಜೆ ಟೀ-ಕಾಫಿ ಪೂರೈಸಲು ನಗರದ ಪ್ರತಿ ವಾರ್ಡ್‍ನಲ್ಲೂ ಕಾಫಿ ಏರಿಯಾ ತೆರೆಯಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ವಕೀಲರು ಕೋರಿದರು.
ಅಲ್ಲದೆ, ಈ ಸಂಬಂಧ ಏ.14 ರಂದು ಪಾಲಿಕೆಗೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ 11 ಕ್ಕೆ ಮುಂದೂಡಿತು.