ಬೆಂಗಳೂರು: ಸರ್ಕಾರಿ ಜಮೀನು ದುರ್ಬಳಕೆ ಆರೋಪದಡಿ ಬಿಎಸ್‌ವೈ ಆಪ್ತ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಎನ್.ಹನುಮೇಗೌಡಗೆ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬಿ.ಜೆ.ಪುಟ್ಟಸ್ವಾಮಿ ಮುಖ್ಯಸ್ಥಿಕೆಯ ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಸ್ಥಾಪನೆಗೆ ನೆಲಮಂಗಲದ ಬಳಿ 8 ಎಕರೆ ಜಮೀನು ಮಂಜೂರು ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಯಲಹಂಕದ ಆರ್ಟಿಐ ಕಾರ್ಯಕರ್ತ ಎನ್.ಹನುಮೇಗೌಡ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಮಾಹಿತಿ ಮುಚ್ಚಿಟ್ಟಿದ್ದರು ಎನ್ನಲಾಗಿದೆ.
ಮಂಗಳವಾರ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಮಾಹಿತಿಯನ್ನು ಬಿ.ಜೆ.ಪುಟ್ಟಸ್ವಾಮಿ ಪರ ವಕೀಲರು ನೀಡಿದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅರ್ಜಿದಾರರಿಗೆ 25 ಸಾವಿರ ದಂಡ ವಿಧಿಸಿ, ಪ್ರಕರಣದಿಂದ ಹೊರ ಹಾಕಿತು. ಬಳಿಕ ಪ್ರಕರಣವು ಸಾರ್ವಜನಿಕ ಸ್ಥಿರಾಸ್ತಿ ದುರುಪಯೋಗದ ವಿರುದ್ಧ ಇರುವುದರಿಂದ ಅದನ್ನು ಸ್ವಯಂಪ್ರೇರಿತ ಪಿಐಎಲ್ ಆಗಿ ಮಾರ್ಪಡಿಸಿಕೊಳ್ಳುವುದಾಗಿ ತಿಳಿಸಿತು.
ಪ್ರಕರಣದ ಹಿನ್ನೆಲೆ: ಗಾಣಿಗ ಜನಾಂಗದ ಗುರುಪೀಠಕ್ಕೆ 2011ರ ಬಜೆಟ್‌ನಲ್ಲಿ ಸರ್ಕಾರ 5 ಕೋಟಿ ರೂಪಾಯಿ ಮೀಸಲಿರಿಸಿತ್ತು. ನಂತರ ನೆಲಮಂಗಲ ಸಮೀಪ ನಗರೂರು ಗ್ರಾಮದ ಸರ್ವೇ ನಂಬರ್ 112ರಲ್ಲಿ ಗೋಮಾಳದ ಎಂಟು ಎಕರೆ ಜಮೀನನ್ನು ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿಗೆ ನೋಂದಣಿ ಮಾಡಿಕೊಟ್ಟಿತ್ತು. ಈ ಟ್ರಸ್ಟ್‌ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇವರು ತಮ್ಮ ಅಧಿಕಾರ ಬಳಸಿ ಈ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಎನ್.ಹನುಮೇಗೌಡ, ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಮತ್ತು ಭೂ ಮಂಜೂರಾತಿ ಆದೇಶವನ್ನು ರದ್ದುಪಡಿಸಬೇಕು ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.
ಇದರಿಂದ ಅಸಮಾಧಾನಕ್ಕೆ ಒಳಗಾಗಿದ್ದ ಟ್ರಸ್ಟ್ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಆರ್ಟಿಐ ಕಾರ್ಯಕರ್ತ ಹನುಮೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿತ್ತು. ಈ ಆದೇಶದ ವಿರುದ್ಧ ಹೈಕೋರ್ಟ್ಗೆ ಹನುಮೇಗೌಡ ಮೇಲ್ಮನವಿ ಸಲ್ಲಿಸಿದ್ದಾರಾದರೂ ಪಿಐಎಲ್ ದಾಖಲಿಸುವ ವೇಳೆ ತಮ್ಮ ವಿರುದ್ಧದ ಪ್ರಕರಣದ ಮಾಹಿತಿಯನ್ನು ನಮೂದಿಸಿರಲಿಲ್ಲ ಎನ್ನಲಾಗಿದೆ.