ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಫೋನ್ ಕದ್ದಾಲಿಕೆ ಪ್ರಕರಣವನ್ನು ಈಗಾಗಲೇ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಇಲ್ಲಿಯವರೆಗೆ ಸಿಸಿಬಿ ನಡೆಸಿದ ತನಿಖಾ ವರದಿಯ ಪಟ್ಟಿಯನ್ನು ಸಿಬಿಐ ಪಡೆದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಕಮೀಷನರ್ ಆಗಲು ಲಾಬಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಯ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ಗೆ ವಹಿಸಲಾಗಿತ್ತು. ತನಿಖೆ ವೇಳೆ ಹಿರಿಯ ಐಪಿಎಸ್ ಹಾಗೂ ರಾಜಾಕಾರಣಿಗಳ ಫೋನ್ ಟ್ಯಾಪಿಂಗ್ ಆಗಿರುವ ವಿಚಾರ ಬೆಳಕಿಗೆ ಬಂದಿದ್ದು, ನಂತರ ತನಿಖಾ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರಿಗೆ ನೀಡಲಾಯಿತು. ಅವರು ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಿದ್ದರು.
ಸರ್ಕಾರ ಪ್ರಕರಣದ ಗಂಭೀರತೆ ಅರಿತು ಸಿಬಿಐಗೆ ವರ್ಗಾವಣೆ ಮಾಡಿತು. ಸದ್ಯ ಸಿಬಿಐ ಸುಮಾರು 1 ಸಾವಿರಕ್ಕೂ ಹೆಚ್ಚು ಪುಟಗಳ ಕಡತ ಪಡೆದು ತನಿಖೆ ಕೈಗೆತ್ತಿಕೊಂಡಿದೆ ಎನ್ನಲಾಗ್ತಿದೆ.