ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಮೊಕ್ಕಾಂ ಹೂಡಿರುವ ಎಸ್ಪಿ ಕಿರಣ್ ನೇತೃತ್ವದ ಸಿಬಿಐ ತಂಡ ಇದೀಗ ಐಪಿಎಸ್ ಅಧಿಕಾರಿಯೊಬ್ಬರ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.
ಕಳೆದ ವಾರ ಆಡುಗೋಡಿಯಲ್ಲಿರುವ ಸಿಸಿಬಿ ಟೆಕ್ನಿಕಲ್ ಸೆಲ್ಗೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದುಕೊಂಡ ಸಿಬಿಐ ಇನ್ಸ್ಟೆಕ್ಟರ್ ಮಾಲತೇಶ್ ಹಾಗೂ ಮಿರ್ಜಾ ಆಲಿ ಸೇರಿದಂತೆ ಅಲ್ಲಿನ ಸಿಬ್ಬಂದಿ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ಹಿಂದಿನ ಕಮಿಷನರ್ ಅಲೋಕ್ ಕುಮಾರ್ ಅವರಿಗೆ ಟ್ಯಾಪ್ ಮಾಡಲಾಗಿದ್ದ ಕರೆಗಳ ವಿವರ ಸೇರಿದಂತೆ ಅಗತ್ಯ ಮಾಹಿತಿ ಒಳಗೊಂಡಿರುವ ಪೆನ್ಡ್ರೈವ್ವನ್ನು ಐಪಿಎಸ್ ಅಧಿಕಾರಿಯೊಬ್ಬರಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಹೆಚ್ಚುವರಿ ಪೊಲೀಸ್ ಅಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ಕರೆಯಿಸಿ ಪ್ರಕರಣದ ಕುರಿತಂತೆ ಸಿಬಿಐ ಪ್ರಶ್ನಿಸಿಲು ಸಿದ್ಧತೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ.