ಬೆಂಗಳೂರು: ಯಾರೂ ಇಲ್ಲದ ವೇಳೆ ಮನೆಯೊಂದಕ್ಕೆ ತೆರಳಿ ಮದ್ಯ ಸೇವಿಸಿ ಅವಾಂತರ ಸೃಷ್ಟಿಸಿದ್ದ ವ್ಯಕ್ತಿಯೋರ್ವ ಪೊಲೀಸರ ಮುಂದೆ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಸಿಲಿಕಾನ್ ಸಿಟಿಯ ಇಂದಿರಾ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದಿರಾನಗರದ ಪಿಕಾಸ ಅಪಾರ್ಟ್ಮೆಂಟ್ವೊಂದರ ನಿವಾಸಿ ಅಭಯ್ ಕುಮಾರ್ ಹಂಜೂರ ಎಂಬುವರು ನೀಡಿದ ದೂರಿನ ಮೇರೆಗೆ ರಘುವೀರ್ ಕುಮಾರ್ ಎಂಬಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದರು. ಹೊಸ ವರ್ಷ ಹಿನ್ನೆಲೆಯಲ್ಲಿ ಡಿ.30ರಂದು ಅಭಯ್ ಕುಮಾರ್ ಕುಟುಂಬ ಗೋವಾಕ್ಕೆ ತೆರಳಲು ಮುಂದಾಗಿತ್ತು. ಮನೆ ಬಿಡುವಾಗ ಫ್ಲ್ಯಾಟ್ ಕೀಯನ್ನು ಸೆಕ್ಯೂರಿಟಿ ಗಾರ್ಡ್ಗೆ ನೀಡಿ ಮನೆ ಕೆಲಸದಾತ ಅನಿಲ್ ಎಂಬುವನು ಮನೆಗೆ ಬರುತ್ತಾನೆ. ಆತ ಬಂದಾಗ ಕೀ ಕೇಳಿದರೆ ಕೊಡುವಂತೆ ಅಭಯ್ ಕುಮಾರ್ ಪತ್ನಿ ಹೇಳಿ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು.
ಆದರೆ ಇದಾದ ಮಾರನೇ ದಿನ ಬಂಧಿತ ಆರೋಪಿ ರಘುವೀರ್, ಅನಿಲ್ ಸೋಗಿನಲ್ಲಿ ಬಂದಿದ್ದಾನೆ. ಈತನನ್ನು ಕಂಡು ಅನಿಲ್ ಎಂದು ಭಾವಿಸಿ ಸೆಕ್ಯೂರಿಟಿ ಗಾರ್ಡ್ ಫ್ಲ್ಯಾಟ್ ಕೀ ನೀಡಿ ಕಳುಹಿಸಿದ್ದಾರೆ. ಬಳಿಕ ಮನೆಯೊಳಗೆ ತೆರಳಿದ ಆರೋಪಿಯು ಮದ್ಯ ಇರುವುದನ್ನು ಕಂಡು ಅಲ್ಲೇ ಮದ್ಯ ಸೇವಿಸಿ ಒಂದು ದಿನ ಕಾಲಕಳೆದಿದ್ದಾನೆ.
ಈ ಸುದ್ದಿಯನ್ನೂ ಓದಿ: ಜ.20ಕ್ಕೂ ಮೊದಲೇ ಟ್ರಂಪ್ ತೆಗೆದುಹಾಕಿ: ರಿಪಬ್ಲಿಕನ್ ನಾಯಕರ ಒತ್ತಾಯ; ಮೋದಿ ಟ್ವೀಟ್
ಮಾರನೇ ದಿನ ಮನೆಕೆಲಸಗಾರ ಅನಿಲ್ ಅಪಾರ್ಟ್ಮೆಂಟ್ ಬಳಿ ಬಂದು ಸೆಕ್ಯೂರಿಟಿ ಗಾರ್ಡ್ಗೆ ಕೀ ಕೊಡುವಂತೆ ಕೇಳಿದ್ದಾನೆ. ಈಗಾಗಲೇ ಅನಿಲ್ ಎಂಬಾತನಿಗೆ ಕೀ ನೀಡಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾನೆ. ಆಗ ಮನೆ ಮಾಲೀಕರಿಗೆ ಫೋನ್ ಮಾಡಿ ನಡೆದ ವಿಷಯವನ್ನೆಲ್ಲ ಅನಿಲ್ ವಿವರಿಸಿದ್ದಾನೆ. ಕೂಡಲೇ ಸೆಕ್ಯೂರಿಟಿ ಗಾರ್ಡ್ಗೆ ಮನೆ ಬಳಿ ತೆರಳುವಂತೆ ಮನೆಯವರು ಕರೆ ಮಾಡಿ ತಿಳಿಸಿದ್ದಾರೆ. ಮನೆಗೆ ಹೋಗಿ ನೋಡಿದಾಗ ರಘುವೀರ್ ಮದ್ಯ ಸೇವಿಸಿ ಮಲಗಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆಯಲ್ಲಿ ಬಾಯ್ಬಿಟ್ಟ ಸ್ಫೋಟಕ ಸತ್ಯ:
ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 2019ರಲ್ಲಿ ಬೆಳಗಾವಿಯಲ್ಲಿ ತಾನು ತಂದೆಯನ್ನೇ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಪಬ್ ಜೀ ಆಡಬೇಡ ಎಂದು ಬೈಯ್ದಿದ್ದಕ್ಕೆ ಆಕ್ರೋಶಗೊಂಡು ತನ್ನ ತಂದೆಯನ್ನು ಕೊಲೆ ಮಾಡಿದ್ದ. ಘಟನೆ ಬಳಿಕ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಈತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ.
ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.