ಬೆಂಗಳೂರು : ಕೊನೆಗೂ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಪಬ್, ಕ್ಲಬ್, ನಿರ್ಬಂಧಿತ ಪ್ರದೇಶ ಬಿಟ್ಟು ಉಳಿದೆಡೆ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಸಂಬಂಧ ಅಬಕಾರಿ ಇಲಾಖೆ ಆದೇಶ ಹೊರಡಿಸಿದ್ದು, ಸಿಎಲ್-2 ಪರವಾನಿಗೆ ಇರುವ ಮದ್ಯದ ಮಳಿಗೆ ಮತ್ತು ಸಿಎಲ್-11ಸಿ (ಎಂಎಸ್ಐಎಲ್) ಮಳಿಗೆಗಳ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮತ್ತು ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್ಬಿಸಿಎಲ್) ಡಿಪೋಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಉಳಿದಂತೆ ಪಬ್, ಕ್ಲಬ್ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜೊತೆಗೆ ಮಾಲ್ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಸಿಎಲ್-2 ಮತ್ತು ಸಿಎಲ್-11ಸಿ ಪರವಾನಗಿ ಇರುವ ಮಳಿಗೆಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ತಿಳಿಸಿದೆ. ಆದರೆ, ಎಲ್ಲಾ ಝೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಮದ್ಯವನ್ನು ಯಾರೂ ಅಲ್ಲೇ ಕುಡಿಯುವ ಹಾಗಿಲ್ಲ. ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಮದ್ಯ ಮಾರಾಟ ಮಾಡುವ ಹಾಗಿಲ್ಲ. ಬೆಳಗ್ಗೆ 9 ಗಂಟೆಯಿಂದ ಸಂಜೆ 7ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಳಿಗೆ ಮುಂದೆ ಕೇವಲ ಐದು ಮಂದಿ ಗ್ರಾಹಕರು ಇರುವಂತೆ ಮತ್ತು ಆರು ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಜೊತೆಗೆ ಮದ್ಯದ ಅಂಗಡಿ ಸಿಬ್ಬಂದಿ, ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಜೊತೆಗೆ ಮಳಿಗೆಯವರು ಸ್ಯಾನಿಟೈಸರ್ ಬಳಸಬೇಕು.