ಬೆಂಗಳೂರು: ಕೊರೊನಾ ವೈರಸ್ಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸಿಕ್ಕಿಬಿಟ್ಟಿತು ಅನ್ನುವಷ್ಟರಲ್ಲಿ, ಯಾವುದೇ ರೋಗಿಗಳ ಗ್ರೂಪ್ ಹೊಂದಿಕೆಯಾಗದ ಕಾರಣದಿಂದ ಚಿಕಿತ್ಸೆ ಆರಂಭವಾಗಲಿಲ್ಲ. ಈಗಾಗಲೇ ಇಬ್ಬರು ಕೊರೊನಾ ಗುಣಮುಖರಿಂದ ಪ್ಲಾಸ್ಮಾ ಪಡೆಯಲಾಗಿತ್ತು. ಆದರೆ ಸದ್ಯ ಅರ್ಧಕ್ಕೆ ಪ್ಲಾಸ್ಮಾ ಥೆರಪಿಯನ್ನ ಕೈಬಿಡಲಾಗಿದೆ.
ಆದರೆ ಕೊರೊನಾ ವಿರುದ್ಧ ಹೋರಾಟ ಮಾಡುವುದನ್ನು ಬಿಡದ ವೈದ್ಯರ ತಂಡ, ಇದೀಗ ಸೈಟೋಕೈನ್ ಥೆರಪಿಯ ಕ್ಲಿನಿಕಲ್ ಟ್ರಯಲ್ ಗೆ ಮುಂದಾಗಿದೆ. ಬೆಂಗಳೂರಿನ ವೈದ್ಯರ ತಂಡದ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು, ಹೆಚ್.ಸಿ.ಜಿ. ಆಸ್ಪತ್ರೆಯ ಡಾ. ವಿಶಾಲ್ ರಾವ್ ನೇತೃತ್ವದ ತಂಡದ ಮತ್ತೊಂದು ಚಿಕಿತ್ಸಾ ವಿಧಾನಕ್ಕೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಗ್ರೀನ್ ಸಿಗ್ನಲ್ ನೀಡಿದೆ.
ಸೈಟೋಕೈನ್ ಥೆರಪಿಯ ಪ್ರಯೋಗ ಈಗಾಗಲೇ ಪ್ರಾಣಿಗಳ ಮೇಲೆ ಮಾಡಿ ಯಶಸ್ವಿಯಾಗಿದೆ. ಈಗ ಮನುಷ್ಯನ ಮೇಲೆ ಪ್ರಯೋಗ ನಡೆಸಲು ಕೇಂದ್ರ ಡ್ರಗ್ ಕಂಟ್ರೋಲರ್ ಅನುಮತಿ ನೀಡಿದ್ದು, ಥೆರಪಿಯಿಂದ ಯಾವುದೇ ಸಮಸ್ಯೆಯಾಗಲ್ಲ ಎಂಬುದನ್ನು ಸಾಬೀತು ಮಾಡಬೇಕಿದೆ. ಸೇಫ್ಟಿ ಟ್ರಯಲ್ ಮಾಡಲು ವೈದ್ಯರ ತಂಡ ತಯಾರಿ ನಡೆಸಿದೆ.
![Permission for Cytokine Therapy Clinical Trial](https://etvbharatimages.akamaized.net/etvbharat/prod-images/7349756_thum.jpg)
ಏನಿದು ಸೈಟೋಕೈನ್ ಥೆರಪಿ..?
ಸೈಟೋಕೈನ್ ಥೆರಪಿ ಇದೊಂದು ಸರಳ ಚಿಕಿತ್ಸಾ ವಿಧಾನವಾಗಿದ್ದು, ಮನುಷ್ಯನ ದೇಹದೊಳಗೆ ಕೊರೊನಾ ವೈರಸ್ ಕೊಲ್ಲುವ ಇಂಟರ್ ಫೆರೋನ್ ಪದಾರ್ಥದ ಕಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಕೋವಿಡ್-19 ರೋಗಿಯ ದೇಹದಲ್ಲಿ ಈ ಕಣ ಬಿಡುಗಡೆಯಾಗುವುದಿಲ್ಲ. ಯಾಕೆಂದರೆ ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿರುತ್ತದೆ. ದೇಹದಲ್ಲಿ ಕೊರೊನಾ ವೈರಸ್ನಿಂದ ಕಳೆದು ಹೋದ ರೋಗ ನಿರೋಧಕ ಶಕ್ತಿಯನ್ನ, ಹೊಸ ಔಷಧದ ಮೂಲಕ ಮರಳಿ ಪಡೆಯಬಹುದು.
ಇಂಜೆಕ್ಷನ್ ಮೂಲಕ ದೇಹಕ್ಕೆ ಸೈಟೋಕೈನ್ಗಳನ್ನು ಸೇರಿಸುವ ಮೂಲಕ ವೈರಸ್ ವಿರುದ್ಧ ಕಾದಾಡುವ ಶಕ್ತಿಯನ್ನು ದೇಹದ ಜೀವ ಕಣಗಳಿಗೆ ನೀಡುವುದು. ವೈದ್ಯರ ತಂಡ ಸೈಟೊಕೈನ್ಗಳ ಮಿಶ್ರಣವನ್ನು ಸಿದ್ಧಪಡಿಸಿದೆ. ಇದನ್ನು ಕೊರೊನಾ ಪಾಸಿಟಿವ್ ಇರುವ ರೋಗಿಗಳ ದೇಹಕ್ಕೆ ನೀಡಲಾಗುತ್ತದೆ. ಆಗ ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸೈಟೋಕೈನ್ಗಳು ದೇಹಕ್ಕೆ ಸೇರಿದ ನಂತರ ಜೀವ ಕಣಗಳು ಇಂಟರ್ ಫೆರೊನ್ ಎನ್ನುವ ರಾಸಾಯನಿಕವನ್ನ ಬಿಡುಗಡೆ ಮಾಡುತ್ತವೆ. ಇದರಿಂದ ದೇಹದಲ್ಲಿ ಕೊರೊನಾ ವೈರಸ್ ನಾಶವಾಗುತ್ತದೆ.