ಬೆಂಗಳೂರು: ಕೊರೊನಾ ಎರಡನೇ ಅಲೆ ಬಂದು ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಜನ ಲಸಿಕೆಗಾಗಿ ಆಸ್ಪತ್ರೆ ಹಾಗೂ ಲಸಿಕಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಮೊದಲ ಡೋಸ್ ಪಡೆದುಕೊಂಡವರು ಎರಡನೇ ಡೋಸ್ಗಾಗಿ ಊಟ, ನೀರು ಬಿಟ್ಟು ಪರದಾಡುತ್ತಿದ್ದಾರೆ.
ಕೆಆರ್ ಪುರಂ ಸರ್ಕಾರಿ ಶಾಲೆಯಲ್ಲಿ ಕಳೆದ 10 ದಿನಗಳಿಂದ ಲಸಿಕೆಯನ್ನು ಹಾಕಲಾಗುತ್ತಿದೆ. ಕೋವ್ಯಾಕ್ಸಿನ್ " ನೋ ಸ್ಟಾಕ್" ಎಂದು ಬೋರ್ಡ್ ನೇತಾಕಿದ್ದಾರೆ. ಆದರೆ ಕೋವಿಶೀಲ್ಡ್ ಲಭ್ಯವಿದ್ದರೂ ಹಾಕುತ್ತಿಲ್ಲ ಎಂಬ ದೂರುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಸರ್ಕಾರದ ನಿಯಮಗಳ ಪ್ರಕಾರ ಕೋವಿಶೀಲ್ಡ್ ಮೊದಲ ಲಸಿಕೆ ಪಡೆದವರಿಗೆ ಎರಡನೇ ಲಸಿಕೆ ಪಡೆಯಲು ಸೂಮಾರು 84 ದಿನ ಅಂತರ ಇರಬೇಕು ಎಂದು ಕಾನೂನು ಮಾಡಲಾಗಿದೆ. ಆದರೆ ಜನ ತಮಗೆ ಎರಡನೆ ಲಸಿಕೆ ನೀಡಿ, ಇಲ್ಲಿ ಬಂದವರಲ್ಲಿ ಯಾರು 84 ದಿನ ಆಗಿಲ್ಲ. ನಮ್ಮದು 50 ದಿನ ಅಂತರ ಇದೆ. ನಮಗೆ ನೀಡಿ ನಮ್ಮ ಜೀವವನ್ನು ಉಳಿಸಿ ಎಂದು ಗಲಾಟೆ ಮಾಡಿದರು.
ಬೆಳಗ್ಗೆಯಿಂದ ಕಾಯುತ್ತಿದ್ದ ಕೆಆರ್ ಪುರಂ ನಿವಾಸಿ ನವೀನ್ ಮಾತನಾಡಿ, ಆನ್ಲೈನ್ನಲ್ಲಿ ಕೆಆರ್ ಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿರುವ ಬಗ್ಗೆ ತೋರಿಸಿದರು. ಅಧಿಕಾರಿಗಳು ಮಾತ್ರ ನೋ ಸ್ಟಾಕ್ ಎಂದು ಬೋರ್ಡ್ ಹಾಕಿ ಜನರನ್ನ ಯಾಮಾರಿಸುತ್ತಿದ್ದಾರೆ. ಹಿರಿಯ ನಾಗರಿಕರು ಸೇರಿ ನಾವೆಲ್ಲಾ ಬೆಳಗ್ಗೆ 5 ಗಂಟೆಗೆ ಬಂದು ಕಾಯುತ್ತಿದ್ದೇವೆ. ಆದರೆ ಇಲ್ಲಿ ಯಾರಿಗೂ ಲಸಿಕೆ ನೀಡುತ್ತಿಲ್ಲ ಎಂದು ದೂರಿದರು.
ಶ್ರೀಧರ್ ಎಂಬುವರು ಮಾತನಾಡಿ, ನಮ್ಮ ಸರ್ಕಾರ ಡಾಕ್ಟರ್ಗಳ ಬಳಿ ಸುಳ್ಳು ಹೇಳಿಸುತ್ತಿದೆ. ಲಸಿಕೆ ಖಾಲಿಯಾಗಿರುವುದರಿಂದ ಸುಮ್ಮನೆ ಹೆಚ್ಚು ದಿನ ಅಂತರವನ್ನು ನಿಗದಿಪಡಿಸಿ ಜನಗಳನ್ನ ಸಾಯಿಸಲು ಪ್ಲಾನ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೊದಲ ಲಸಿಕೆ ಪಡೆಯಲು ಬಂದವರಿಗೂ ನೀಡುತ್ತಿಲ್ಲ, ಎರಡನೇ ಲಸಿಕೆ ಪಡೆಯಲು ಬಂದವರಿಗೂ ಲಸಿಕೆ ನೀಡುತ್ತಿಲ್ಲ. ಆನ್ ಲೈನ್ ಆ್ಯಪ್ಗಳಲ್ಲಿ ಮಾತ್ರ ಲಸಿಕೆ ಲಭ್ಯ ಇದೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದನ್ನ ನಂಬಿ ಜನ ಗಂಟೆಗಟ್ಟಲೇ ಕಾದು ವಾಪಸ್ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.