ಬೆಂಗಳೂರು: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮತೀರ್ಥಂನ ಬೋಡಿಕೊಂಡ ಬೆಟ್ಟದ ಮೇಲಿರುವ ಪ್ರಾಚೀನ ಸೀತಾ ಲಕ್ಷ್ಮಣ ಕೋದಂಡರಾಮ ದೇವಸ್ಥಾನದಲ್ಲಿ ಇತ್ತೀಚೆಗೆ ಭಗವಾನ್ ರಾಮ್ ವಿಗ್ರಹ ಧ್ವಂಸ ಪ್ರಕರಣ ಇಡೀ ಹಿಂದೂ ಸಮುದಾಯವನ್ನು ಕೆರಳಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಮತೀರ್ಥ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪೇಜಾವರ ಶ್ರೀಗಳು ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ದುಷ್ಕರ್ಮಿಗಳು ಐತಿಹಾಸಿಕ ದೇವಾಲಯವನ್ನು ತೆರೆದು ಗರ್ಭಗುಡಿಯಲ್ಲಿ 400 ವರ್ಷಗಳ ಹಳೆಯ ರಾಮ್ ವಿಗ್ರಹವನ್ನು ತುಂಡರಿಸಿ ಅಪವಿತ್ರಗೊಳಿಸಿದ್ದಾರೆ. ವಿಗ್ರಹದ ಕತ್ತರಿಸಿದ ಭಾಗವನ್ನು ದೇವಾಲಯದ ಸಮೀಪದ ಕೊಳದಲ್ಲಿ ಪತ್ತೆ ಮಾಡಲಾಗಿದೆ. ಸುಮಾರು 20 ದಿನಗಳ ಹಿಂದೆ ಈ ಘಟನೆ ನಡೆದಿದೆ. ಆದರೆ ಆಂಧ್ರಪ್ರದೇಶ ಸರ್ಕಾರ ದುಷ್ಕರ್ಮಿಗಳನ್ನು ಬಂಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ದೇವಾಲಯದ ಮೇಲೆ ವಿಧ್ವಂಸಕ ಕೃತ್ಯಗಳ ಘಟನೆಗಳಿಗೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ಬಿತ್ರಗುಂಟಾ (ನೆಲ್ಲೂರು) ನಲ್ಲಿ ದೇವಾಲಯದ ರಥಗಳನ್ನು, ಸೆಪ್ಟೆಂಬರ್ನಲ್ಲಿ ಅಂಟಾರ್ವೇದಿ (ಪೂರ್ವ ಗೋದಾವರಿ) ಮತ್ತು ಜನವರಿಯಲ್ಲಿ ಪಿತಾಪುರಂನಲ್ಲಿ ಹಲವಾರು ಹಿಂದೂ ವಿಗ್ರಹಗಳನ್ನು ಅಪವಿತ್ರಗೊಳಿಸಿರುವುದು ಕಳೆದ ವರ್ಷ ವರದಿಯಾದ ಕೆಲವು ದುರುದ್ದೇಶಪೂರಿತ ಕೃತ್ಯಗಳಾಗಿವೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಓದಿ: ದೇವಾಲಯಗಳ ಮೇಲಿನ ದಾಳಿಗಳನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್
ಕಳೆದ ಒಂದೂವರೆ ವರ್ಷಗಳಲ್ಲಿ, ದೇವಾಲಯಗಳ ಮೇಲೆ 120 ದಾಳಿಗಳು ನಡೆದಿವೆ. ಈ ದಾಳಿಗಳು ಪೂರ್ವನಿರ್ಧರಿತ ಯೋಜನೆಯಂತೆ ಕಂಡು ಬರುತ್ತಿವೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ದುಷ್ಕೃತ್ಯಗಳನ್ನು ಎಸಗುತ್ತಿರುವುದು ಸ್ಪಷ್ಟವಾಗಿದೆ. ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳ ಹಿಂದಿರುವ ಜನರನ್ನು ಪತ್ತೆಹಚ್ಚಿ ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ದೇವಾಲಯಗಳನ್ನು ರಕ್ಷಿಸಲು ಹಿಂದೂ ಸಮುದಾಯ ಮಾಡುತ್ತಿರುವ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ.
ಆಂಧ್ರಪ್ರದೇಶದಲ್ಲಿ ಈ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಇದು ಇಡೀ ಹಿಂದೂ ಸಮುದಾಯದ ಮೇಲೆ ಪರಿಣಾಮ ಬೀರುವ ಸೂಕ್ಷ್ಮ ವಿಷಯವಾಗಿದೆ. ಆದ್ದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ರಾಮತೀರ್ಥಂ ದೇವಾಲಯದ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪತ್ರದ ಮೂಲಕ ಪೇಜಾವರ ಶ್ರೀ ಮನವಿ ಮಾಡಿದ್ದಾರೆ.