ಬೆಂಗಳೂರು: ಸದ್ಯ ಕೋವಿಡ್ ತುರ್ತು ಕಾರಣದಿಂದ ವೈದ್ಯಕೀಯ ಉದ್ದೇಶಕ್ಕೆ ಕೈಗಾರಿಕಾ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ತಯಾರಿಕಾ ವಲಯಕ್ಕೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಪುನರಾರಂಭಿಸುವಂತೆ ಪೀಣ್ಯ ಕೈಗಾರಿಕಾ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್, ಗೌರವ ಕಾರ್ಯದರ್ಶಿ ಶಾಮಚಂದ್ರನ್ ಮತ್ತು ಉದ್ಯಮಿ ಮಲ್ಲಿಕಾರ್ಜುನಯ್ಯ ಆಗಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾದರು. ಕರ್ನಾಟಕ ರಾಜ್ಯದ ಉದ್ಯೋಗದ ಹೆಬ್ಬಾಗಿಲಂತಿರುವ ಆಗ್ನೇಯ ಏಷ್ಯಾದ ಅತಿ ಬೃಹತ್ತಾದ ಕೈಗಾರಿಕಾ ಸಮುಚ್ಛಯವಾದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕಳೆದ ಆರು ವಾರಗಳ ಕೋವಿಡ್ ಲಾಕ್ಡೌನ್ನಿಂದ ಉಂಟಾಗಿರುವ ಕಷ್ಟನಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ನಿಂದ ಅಳಿವಿನಂಚಿಗೆ ಬಂದಿರುವ ಕೈಗಾರಿಕೆಗಳನ್ನು ಉಳಿಸಲು ತತ್ಕ್ಷಣದಿಂದ ತಯಾರಿಕಾ ವಲಯಕ್ಕೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಪುನಾರಂಭಿಸಬೇಕು. 3 ತಿಂಗಳವರೆಗೆ ವಿದ್ಯುತ್ ಶುಲ್ಕದಲ್ಲಿನ ನಿಗದಿತ ಶುಲ್ಕ(ಫಿಕ್ಸಡ್ ಚಾರ್ಜ್)ವನ್ನು ಮನ್ನಾ ಮಾಡಬೇಕು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.