ಬೆಂಗಳೂರು: ನ್ಯಾಯಾಲಯದಲ್ಲಿ ಬಾಕಿ ಇರುವ ಹಲವು ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತು ಪಡಿಸಿ 63 ಸ್ಥಳೀಯ ಸಂಸ್ಥೆಗಳಿಗಲ್ಲಿ ಚುನಾವಣೆ ಶಾಂತಿಯುತವಾಗಿ ಜರುಗಿದೆ. ರಾಜ್ಯದಾದ್ಯಂತ ಶೇ.72ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀ ನಿವಾಸಚಾರಿ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಇಂದು 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತು ಪಡಿಸಿ 63 ಸ್ಥಳೀಯ ಸಂಸ್ಥೆಗಳಿಗೆ ಆಯೋಗ ಚುನಾವಣೆ ನಡೆಸಲು ವೇಳಾ ಪಟ್ಟಿ ಪ್ರಕಟಿಸಿತ್ತು. ಆ ಪೈಕಿ ಕರ್ನಾಟಕ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಪಡೆದಿದ್ದರಿಂದ ಸೊರಬ ಮತ್ತು ನೆಲಮಂಗಲ ಹೊರತು ಪಡಿಸಿ ಒಟ್ಟು 61 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ಮತದಾನವಾಗಿದ್ದು, ಶೇ. 72ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಇದರ ಮತ ಎಣಿಕೆಯು ಮೇ 31ರಂದು ನಡೆಯಲಿದ್ದು, ಇನ್ನು ಬೇರೆ ದಿನದಂದು ಚುನಾವಣೆ ನಡೆಯುತ್ತಿರುವುದರಿಂದ ಬೆಂಗಳೂರು ಗ್ರಾಮಾಂತರ ಹಾಗೂ ಶಿವಮೊಗ್ಗ ಜಿಲ್ಲೆಯ ಒಟ್ಟು 6 ನಗರದ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಜೂ.3ರಂದು ನಿಗದಿಪಡಿಸಲಾಗಿದೆ. ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಪೋಲಿಂಗ್ ಏಜೆಂಟ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆನೇಕಲ್ನಲ್ಲಿ ಕೇಳಿದ ಜಾಗಕ್ಕೆ ಮತಗಟ್ಟೆಯನ್ನು ಹಾಕಲಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ಸಮಯಗಳ ಕಾಲ ಮತದಾನ ಆರಂಭವಾಗಿರಲಿಲ್ಲ. ಮತಗಟ್ಟೆ ಬದಲಾವಣೆಗೆ ಕೊನೆ ಕ್ಷಣದಲ್ಲಿ ಪ್ರಸ್ತಾವನೆ ಕಳುಹಿಸಿದರು. ಆದರೆ ಆಗ ಮತಗಟ್ಟೆ ಬದಲಾವಣೆ ಮಾಡಿದರೆ ಗೊಂದಲವಾಗುತ್ತದೆ ಎಂಬ ಕಾರಣಕ್ಕೆ ಅಂಗೀಕರಿಸಲಿಲ್ಲ. ಇದರ ಬಗ್ಗೆ ಕೆಲವರಿಗೆ ಅಸಮಾಧಾನ ಉಂಟಾಗಿ ಮತದಾನ ಪ್ರಕ್ರಿಯೆ ತಡವಾಯಿತು ಎಂದರು.