ಬೆಂಗಳೂರು: ಕದ್ದ ಚಿನ್ನವನ್ನ ಖರೀದಿಸುತ್ತಿದ್ದ ಆರೋಪದ ಮೇಲೆ ಗಿರವಿ ಅಂಗಡಿ ಮಾಲೀಕನನ್ನು ವಿವೇಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್ನಲ್ಲಿರುವ ಪೂಜಾ ಬ್ಯಾಂಕರ್ಸ್ ಮಾಲೀಕ ಭವರ್ ಲಾಲ್ ಪೊಲೀಸರ ಅತಿಥಿಯಾದ ವ್ಯಕ್ತಿ. ಮನೆಗಳ್ಳರಿಂದ ಕದ್ದ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಸ್ವೀಕರಿಸುತ್ತಿದ್ದ ಭವರ್ ಲಾಲ್ ಅವರು ಪೊಲೀಸರ ನೋಟಿಸ್ಗೆ ಉತ್ತರಿಸದೇ ನಾಟಕವಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚಿಗೆ ವಿವೇಕ ನಗರ ಠಾಣೆಯ ಪೊಲೀಸರು ಶ್ರೀನಿವಾಸ ಅಲಿಯಾಸ್ ಅಪ್ಪು ಎಂಬ ಮನೆಗಳ್ಳತನದ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ಶ್ರೀನಿವಾಸನು ಅಶೋಕನಗರ, ಜೆ ಬಿ ನಗರ, ಹೆಚ್ಎಎಲ್ ಸೇರಿದಂತೆ ಹಲವು ಭಾಗದಲ್ಲಿ ಎಂಟಕ್ಕೂ ಹೆಚ್ಚು ಮನೆಗಳನ್ನು ದೋಚಿ ಕದ್ದ ಚಿನ್ನಾಭರಣವನ್ನ ಹತ್ತಾರು ಕಡೆ ಅಡವಿಟ್ಟಿರೋದಾಗಿ ಬಾಯ್ಬಿಟ್ಟಿದ್ದನಂತೆ.
ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಗಿರವಿ ಅಂಗಡಿ ಮಾಲೀಕ ಈ ಭವರ್ ಲಾಲ್ ಅವರಿಗೆ ನೋಟಿಸ್ ನೀಡಿದರೆ ಉತ್ತರಿಸುತ್ತಿರಲಿಲ್ಲ. ಮಹಜರು ಕಾಪಿ ಹಿಡಿದು ಪೊಲೀಸರು ಅಂಗಡಿ ಬಳಿ ಬಂದರೆ ಉಡಾಫೆ ಉತ್ತರ ನೀಡುತ್ತಿದ್ದರು. ವಿಧಿಯಿರದೇ ವಿವೇಕನಗರ ಠಾಣಾ ಪೊಲೀಸರು ಸದ್ಯ ಗಿರವಿ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಗಿರವಿ ಅಂಗಡಿಗೆ ಬರುತ್ತಿದ್ದಂತೆ ಭವರ್ ಲಾಲ್ ಪತ್ನಿ, ಮಕ್ಕಳು ತಮ್ಮ ತಂದೆಯನ್ನು ವಶಕ್ಕೆ ಪಡೆಯದಂತೆ ಸ್ಥಳದಲ್ಲಿ ಪೊಲೀಸರಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ನಿವೃತ್ತ ಯೋಧನಿಗೆ 27 ಲಕ್ಷ ರೂ ವಂಚನೆ: ನಿವೃತ್ತ ಯೋಧನನ್ನು ಗಾರ್ಡ್ ಆಗಿ ನೇಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಮುಂಬರುವ ದಿನಗಳಲ್ಲಿ ರಾಜ್ಯಪಾಲನಾಗಿ ಆಯ್ಕೆಯಾಗಲಿದ್ದೇನೆ. ಆಗ ನಿಮ್ಮನ್ನೇ ಸರ್ಕಾರಿ ಗಾರ್ಡ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ ಎಂದೆಲ್ಲಾ ಸುಳ್ಳು ಹೇಳಿ ನಂಬಿಸಿ 27 ಲಕ್ಷ ರೂಪಾಯಿ ಮೋಸ ಮಾಡಿರುವ ಆರೋಪ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಮಾರುತಿ ಘೋಡಕೆ ಹಣ ಕಳೆದುಕೊಂಡಿರುವ ನಿವೃತ್ತ ಯೋಧ. ಇವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿವಾಸಿ ಎಂದು ತಿಳಿದುಬಂದಿದೆ.
ಮಾರುತಿ ಘೋಡಕೆ ಸೇನೆಯಿಂದ ನಿವೃತ್ತಿಯಾದ ಬಳಿಕ ಊರಿಗೆ ಮರಳಿದ್ದರು. ಮನೆಯಲ್ಲಿ ಖಾಲಿ ಇರೋದು ಬೇಡ ಅಂತ ಜೈ ಸೆಕ್ಯೂರಿಟಿ ಗಾರ್ಡ್ ಮ್ಯಾನ್‌ಪವರ್ ಸಂಸ್ಥೆಯಲ್ಲಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದರು. ಸಂಸ್ಥೆಯವರು ಮಾರುತಿ ಅವರನ್ನು ಕಲಬುರಗಿ ನಗರದ ರಿಂಗ್ ರಸ್ತೆಯ ಹೊಸ ಬಡಾವಣೆ ನಿವಾಸಿ ಶಾಂತಕುಮಾರ್ ಜೆಟ್ಟೂರು ಬಳಿ ಭದ್ರತಾಧಿಕಾರಿಯಾಗಿ ನಿಯೋಜಿಸಿದ್ದಾರೆ.
ಶಾಂತಕುಮಾರ್ ಜೆಟ್ಟೂರ್, ನಿವೃತ್ತ ಯೋಧನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡ ನಂತರ ವೇತನ ನೀಡುವ ಬದಲು, ತಾನು ತೆಲಂಗಾಣದ ರಾಜ್ಯಪಾಲನಾಗಲಿದ್ದೇನೆ. ನಂತರ ನಿಮ್ಮನ್ನು ಖಾಯಂ ಆಗಿ ನಾನೇ ನೇಮಕ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದರಂತೆ. ಅಷ್ಟೇ ಅಲ್ಲ, ತೆಲಂಗಾಣ, ದೆಹಲಿ ಸೇರಿದಂತೆ ನಾನಾ ಕಡೆ ಮಾರುತಿಯನ್ನು ಕರೆದುಕೊಂಡು ಹೋಗಿ ಅಲ್ಲಿರುವ ಕೆಲವು ವ್ಯಕ್ತಿಗಳನ್ನು ಪರಿಚಯಿಸಿ ರಾಜ್ಯಪಾಲನಾಗುವ ಬಗ್ಗೆ ನಂಬಿಕೆ ಹುಟ್ಟಿಸಿದ್ದರಂತೆ.
ಆದರೆ, ರಾಜ್ಯಪಾಲನಾಗಲು ಸ್ವಲ್ಪ ಹಣ ಬೇಕಿದೆ. ನನ್ನ ಅಕೌಂಟ್ನಲ್ಲೇ ಹಣ ಇದೆ. ಆದರೆ ಪ್ರೊಟೋಕಾಲ್ ಪ್ರಕಾರ ಅದನ್ನು ತೆಗೆಯಲು ಸಾಧ್ಯವಿಲ್ಲ. ಒಂದೂವರೆ ತಿಂಗಳ ಸಲುವಾಗಿ ಹಣ ಅಡ್ಜೆಸ್ಟ್ ಮಾಡಿ ಅಂತ ಹೇಳಿ ಮಾರುತಿ ಅವರಿಂದ 27 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಶಾಂತಕುಮಾರ್ ಜೆಟ್ಟೂರ್ ಮಾತು ನಂಬಿದ ಮಾರುತಿ, ಆತನ ಮನೆಯನ್ನು ಗುಂಡಪ್ಪ ಅನ್ನೋ ಕಾರ್ಪೆಂಟರ್ ಮುಖಾಂತರ ನವೀಕರಿಸಿದ್ದಾನೆ. ಗುಂಡಪ್ಪ ತನ್ನ ಬಳಿಯಿದ್ದ ಒಂದೂವರೆ ಲಕ್ಷ ಹಣವನ್ನೂ ಹಾಕಿ ಶಾಂತಕುಮಾರ್ ಮನೆಯನ್ನು ನವೀಕರಣಗೊಳಿಸಿದ್ದಾನೆ. ಇದಾದ ನಂತರ ಮನೆಗೆ ಹಾಕಿದ ಹಣ ಕೂಡ ಶಾಂತಕುಮಾರ್ ಜೆಟ್ಟೂರ್ ಕೊಟ್ಟಿರಲಿಲ್ಲ. ಗುಂಡಪ್ಪ, ನಿವೃತ್ತ ಯೋಧನ ಬಳಿ ಹಣ ಕೇಳಿದರೆ ತಾನೂ ಕೂಡ 25 ಲಕ್ಷ ರೂ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ ಎಂದು ನಿವೃತ್ತ ಮಾರುತಿ ಆರೋಪಿಸಿದ್ದಾರೆ.
ತಿಂಗಳುಗಳು ಉರುಳಿದರೂ ಕೆಲಸಕ್ಕೂ ನೇಮಕ ಮಾಡಿಕೊಂಡಿಲ್ಲ, ಇತ್ತ ಇಬ್ಬರಿಗೂ ಆತ ಹಣ ವಾಪಸ್ ಕೊಟ್ಟಿರಲಿಲ್ಲ. ಹಣ ಕೇಳಿದಾಗಲೆಲ್ಲಾ ಇಬ್ಬರನ್ನೂ ಹೆದರಿಸಿ ಕಳುಹಿಸಿದ್ದಾನೆ. ಸಾಕಷ್ಟು ಅಲೆದು ಸುಸ್ತಾಗಿ ಇದೀಗ ಕಲಬುರಗಿಯ ಎಮ್. ಬಿ ನಗರ ಪೊಲೀಸ್ ಠಾಣೆಯಲ್ಲಿ ಮಾರುತಿ ದೂರು ನೀಡಿದ್ದಾರೆ. ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಲು ಕಲಬುರಗಿ ಪತ್ರಿಕಾ ಭವನಕ್ಕೆ ಆಗಮಿಸಿದ ಶಾಂತಕುಮಾರ ಜೆಟ್ಟೂರ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ : ಚಿನ್ನ ಕದ್ದು ಜೈಲು ಸೇರಿದ ಲವರ್ಸ್: ಸಾಥ್ ಕೊಟ್ಟ ಸ್ನೇಹಿತನಿಗೂ ಜೈಲೂಟ