ಬೆಂಗಳೂರು : ಬೀದರ್ನಿಂದ ಯಶವಂತಪುರಕ್ಕೆ ಮಕ್ಕಳ ಜೊತೆ ಪ್ರಯಾಣ ಬೆಳೆಸುತ್ತಿದ್ದ ದಂಪತಿ ತಮ್ಮ ಓರ್ವ ಮಗಳನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದ ಘಟನೆ ನಗರದಲ್ಲಿ ಜರುಗಿದೆ.
35 ವರ್ಷದ ಸಂಗಪ್ಪ ಹಾಗೂ ಅವರ ಪತ್ನಿ ಐವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಆದ್ರೆ, ರೈಲಿನಿಂದ ಇಳಿದು ಹೋಗಬೇಕಾದ್ರೆ ನಿದ್ದೆ ಮಾಡುತ್ತಿದ್ದ ತಮ್ಮ ಮಗಳನ್ನು ಮರೆತು ಆಕೆಯನ್ನು ಎಚ್ಚರಿಸದೆ ಇಳಿದು ಹೋಗಿದ್ದಾರೆ.
ನಿನ್ನೆ ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ರಾಜಾನುಕುಂಟೆ ಬಳಿ ಈ ಘಟನೆ ಜರುಗಿದೆ. ರೈಲು ಮುಂದಕ್ಕೆ ಚಲಿಸಿದ ಬಳಿಕ ಹೆತ್ತವರಿಗೆ ಮಗಳ ನೆನಪಾಗಿದೆ. ತಕ್ಷಣವೇ ರಾಜಾನುಕುಂಟೆ ಸ್ಟೇಷನ್ ಮಾಸ್ತರರಿಗೆ ಈ ವಿಚಾರ ತಿಳಿಸಿದ್ದಾರೆ. ಕೂಡಲೇ ಸೆಕ್ಯುರಿಟಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಗಮನಕ್ಕೆ ತಂದಿದ್ದಾರೆ.
ರಕ್ಷಣಾ ಪಡೆಯ ಗಮನಕ್ಕೆ ಬಂದ ಅರ್ಧ ಗಂಟೆಯಲ್ಲಿ ಮಗು ಹುಡುಕಿ ಹೆತ್ತವರಿಗೆ ಒಪ್ಪಿಸುವಲ್ಲಿ ಆರ್‌ಪಿಎಫ್ ತಂಡ ಯಶಸ್ವಿಯಾಗಿದೆ. ರೈಲು ಯಶವಂತಪುರ ನಿಲ್ದಾಣಕ್ಕೆ 7-30ಕ್ಕೆ ತಲುಪಿದೆ. ಮಗು ಇನ್ನೂ ಕೂಡ ಅದೇ ಸೀಟಿನಲ್ಲಿ ನಿದ್ದೆ ಮಾಡುತ್ತಿತ್ತು.
ಕೂಡಲೇ ಮಗುವನ್ನು ರಕ್ಷಿಸಿ ಹೆತ್ತವರಿಗೆ ನೀಡುವಲ್ಲಿ ರೈಲ್ವೆ ರಕ್ಷಣಾ ತಂಡ ಉತ್ತಮ ಕೆಲಸ ಮಾಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಆರ್‌ಪಿಎಫ್ ಪಡೆಯ ಕೆಲಸ ಶ್ಲಾಘಿಸಿದ್ದಾರೆ.