ಬೆಂಗಳೂರು : ಖಾಸಗಿ ಶಾಲೆಗಳ ಫೀಸ್ ಸುಲಿಗೆ ವಿರೋಧಿಸಿ ರಾಜ್ಯ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಹಾಗೂ ವಾಯ್ಸ್ ಆಫ್ ಪೇರೆಂಟ್ಸ್ ವತಿಯಿಂದ ನಗರದ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯ್ತು. ದಿಢೀರ್ ಮಿಲಿಯೇನರ್ ಆಗಬೇಕಾ? ಶಾಲೆ ತೆರೆಯಿರಿ ಅಂತಾ ಘೋಷಣೆ ಕೂಗಿ, ಕಪ್ಪು ಪಟ್ಟಿ ಕಟ್ಟಿಕೊಂಡು ಪೋಷಕರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಸರ್ಕಾರದ ವಿರುದ್ಧ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಚಾಟಿ ಏಟು ಬೀಸಿ, ಪೋಷಕರ ಮನವಿ ಪರಿಶೀಲಿಸಿ ಶುಲ್ಕ ನಿಯಂತ್ರಣ ಸಮಿತಿ ರಚಿಸಬೇಕು. ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೆ ಸರ್ಕಾರವನ್ನೇ ಬದಲಾಯಿಸುತ್ತೇವೆ. ರಾಜ್ಯದಲ್ಲಿ ಎರಡುವರೆ ಕೋಟಿ ಪೋಷಕರು ಇದ್ದಾರೆ. ಮುಂದಿನ ಎಲೆಕ್ಷನ್ನಲ್ಲಿ ಹಕ್ಕು ಚಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಶಾಲೆಗಳು ಫೀಸ್ ವಿಚಾರದಲ್ಲಿ ಸುಲಿಗೆ ಮಾಡ್ತಿವೆ. 2021-2022ನೇ ಶೈಕ್ಷಣಿಕ ಸಾಲಿನಲ್ಲಿ ಎಷ್ಟು ಶುಲ್ಕ ಕಟ್ಟಬೇಕು, ಎಷ್ಟು ಪಡಿಯಬೇಕು ಎಂಬ ಸ್ಪಷ್ಟತೆ ಇಲ್ಲ. ಕೋರ್ಟ್ 2020-2021ರಲ್ಲಿ ಶೇ.15ರಷ್ಟು ಮಾತ್ರ ಕಡಿತ ಮಾಡಿ ಆದೇಶ ಮಾಡಿದೆ.
ಆದ್ರೆ, ಪ್ರಸಕ್ತ ವರ್ಷದಲ್ಲಿ ಎಷ್ಟು ಶುಲ್ಕ ಪಡಿಯಬೇಕು ಅಂತಾ ಮಾಹಿತಿ ಇಲ್ಲ. ಹೀಗಾಗಿ, ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿ ಸಮಸ್ಯೆ ಮಾಡ್ತಿವೆ. ಹಲವು ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇದೆ. ನಮ್ಮ ರಾಜ್ಯದಲ್ಲಿಯೂ ಈ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶುಲ್ಕ ನಿಯಂತ್ರಣ ಹಾಗೂ ಮೇಲುಸ್ತುವಾರಿ ಆಯೋಗ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು. ಶಿಕ್ಷಣ ತಜ್ಞ ನಿರಾಂಜನ ಆರಾಧ್ಯ, ಪೋಷಕರ ಸಂಘಟನೆಯ ಸದಸ್ಯರು ಹಾಗೂ ಖಾಸಗಿ ಶಾಲಾ ಪೋಷಕರು ಭಾಗಿಯಾಗಿದ್ದರು.