ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಪರ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಯಲಹಂಕ ಹಳೇ ನಗರದ ಬಿಬಿಎಂಪಿ ಕಚೇರಿ ಬಳಿಯಿಂದ ಆರಂಭವಾದ ರೋಡ್ ಶೋ, ಸಂತೆವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಯವರೆಗೆ ಸಾಗಿತು. ಈ ವೇಳೆ ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ದೇವೇಗೌಡರಿಗೆ ಜೈಕಾರ ಕೂಗಿದರು.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಈ ದೇಶದಲ್ಲಿ ಮಹಿಳೆಯರ ಕೈಗೆ ಅಧಿಕಾರ ಕೊಟ್ಟರೆ ಯಾವ ರೀತಿ ಚಲಾಯಿಸುತ್ತೇವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ರಾಜೀವ್ ಗಾಂಧಿಯವರು 73-74 ನೇ ತಿದ್ದುಪಡಿ ತಂದು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರ ಷ್ಟು ಮೀಸಲಾತಿ ನಿಗದಿಪಡಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿರುವುದನ್ನು ಮರೆಯದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ತೆನೆಹೊತ್ತ ಮಹಿಳೆಯನ್ನೆ ಹುಡುಕಬೇಡಿ:
ಮತದಾನದ ದಿನದಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರು ತೆನೆ ಹೊತ್ತ ಮಹಿಳೆ ಗುರುತು ಎಲ್ಲಿದೆ ಎಂದು ಹುಡುಕಲು ಹೋಗಬೇಡಿ. ಅಲ್ಲಿ ತೆನೆಹೊತ್ತ ಮಹಿಳೆ ಇರುವುದಿಲ್ಲ. ಹೀಗಾಗಿ ಹಸ್ತದ ಗುರುತಿಗೆ ಮತ ಚಲಾಯಿಸುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ವೀರಪ್ಪ ಮೊಯ್ಲಿ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಬಡಮಕ್ಕಳು ಎಂಜಿನಿಯರ್, ವೈದ್ಯರಾಗಲು ಅವಕಾಶ ಮಾಡಿ ಕೊಟ್ಟರು. ಬೆಂಗಳೂರು ನಗರ ಮಹಾನಗರವಾಗಿ ಮಾರ್ಪಾಡುಗೊಂಡು ಐಟಿಸಿಟಿ ಎಂದು ಕರೆಸಿಕೊಳ್ಳಲು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಆಗಿದ್ದು ಕೂಡಾ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ. ಅಲ್ಲದೆ ಎತ್ತಿನಹೊಳೆ ಯೋಜನೆ ವೀರಪ್ಪ ಮೊಯ್ಲಿಯವರ ಕನಸಿನ ಕೂಸು. ಇಂತಹ ಅಭಿವೃದ್ಧಿ ಹರಿಕಾರರನ್ನು ಮತ್ತೊಮ್ಮೆ ಸಂಸದರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃ ಷ್ಣ, ಜಿ.ಪಂ.ಸದಸ್ಯ ಸಿ.ವೆಂಕಟೇಶ್, ಯುವಮುಖಂಡ ಹರ್ಷ ಮೊಯಿಲಿ, ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ ಸಾಥ್ ನೀಡಿದರು.