ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಕೇಸ್ಗಳು ಪತ್ತೆಯಾಗಿದ್ರೂ ಕೂಡ ಜನ ಮಾಸ್ಕ್ ಇಲ್ಲದೇ ರಾಜಾರೋಷವಾಗಿ ಓಡಾಡುತ್ತಿದ್ದು, ಅವರನ್ನು ನಿಯಂತ್ರಿಸಲು ಡಿ ಸ್ವಾಟ್ ತಂಡ ಎಂಟ್ರಿ ಕೊಟ್ಟಿದೆ.
ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಸುಮಾರು 37 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ವಾರ್ಡ್ನಲ್ಲಿ ಜನರು ಮಾಸ್ಕ್ ಧರಿಸದೆ, ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಇದ್ರ ಜೊತೆಗೆ ಬೈಕ್, ಆಟೋಗಳಲ್ಲೂ ತಿರುಗಾಡುತ್ತಾ ಮೊಂಡುತನ ಪ್ರದರ್ಶಿಸುತ್ತಿದ್ದಾರೆ.
ಪಾದರಾಯನಪುರ ಸೀಲ್ಡೌನ್ ಆಗಿದ್ದು ಹೈಅಲರ್ಟ್ ಪ್ರದೇಶವಾಗಿದೆ. ಕಳೆದ ಎರಡು ವಾರಗಳ ಹಿಂದೆ ಕೆಲವರನ್ನು ಕ್ವಾರಂಟೈನ್ ಮಾಡಲು ತೆರಳಿದಾಗ ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಇಲ್ಲಿನ ನಿವಾಸಿಗಳು ಹಲ್ಲೆ ನಡೆಸಿದ್ದರು. ಸದ್ಯ ಈ ಪ್ರದೇಶಲ್ಲಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿದ್ದು, ಜನರ ಓಡಾಟವನ್ನು ತಡೆಯುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಲಾಠಿ ಹಿಡಿದು ಪೊಲೀಸರು ಜನರನ್ನು ಚದರಿಸಲು ಮುಂದಾಗಿದ್ದಾರೆ. ಆದರೂ ಜನ ಕಾಳಜಿ ವಹಿಸದೆ ಮನಬಂದಂತೆ ಓಡಾಡುತ್ತಿರುವುದರಿಂದ ಪಾದರಾಯನಪುರಕ್ಕೆ ವಿಶೇಷ 'ಡಿ ಸ್ವಾಟ್' ತಂಡ ಬಂದಿದೆ.
ಏನಿದು ಡಿ ಸ್ವಾಟ್?
ಯಾವುದಾದರೂ ಪ್ರದೇಶ ಬಹಳ ಕಠಿಣವಾದ ಪರಿಸ್ಥಿತಿ ಎದುರಿಸುವ ಸಂಧರ್ಭದಲ್ಲಿ ಡಿ ಸ್ವಾಟ್ (ಶಸ್ತ್ರಾಸ್ತ್ರ ಮತ್ತು ಯುದ್ಧತಂತ್ರ ಪಡೆ) ತಂಡ ಪರಿಸ್ಥಿತಿ ಹತೋಟಿಗೆ ತರಲು ಪ್ರವೇಶಿಸುತ್ತದೆ. ಪಾದರಾಯನಪುರದಲ್ಲಿ ಅದೇ ರೀತಿಯ ಪರಿಸ್ಥಿತಿ ಇದೆ. ಅತೀ ಸೂಕ್ಷ್ಮ ಪ್ರದೇಶವಾದ ಕಾರಣ ಈ ತಂಡ ಹೆಗಲ ಮೇಲೆ ಗನ್ ಏರಿಸಿ ರೆಡಿಯಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಲಿದ್ದಾರೆ.