ಬೆಂಗಳೂರು: ಕಾಂಗ್ರೆಸ್ನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬಂಧನಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಹಿಂದೆಂದೂ ಈ ರೀತಿಯ ಘಟನೆ ದೇಶದಲ್ಲಿ ನಡೆದಿರಲಿಲ್ಲ ಎಂದು ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ತುಂಬಾ ಹಳೆಯ ಪ್ರಕರಣ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡಾ ಈ ಬಗ್ಗೆ ನಿನ್ನೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದನ್ನು ಕೇಳಿದ್ದೇನೆ. ಏಕೆ ಈ ಹಂತಕ್ಕೆ ಈ ಘಟನೆ ಹೋಯಿತೋ ಗೊತ್ತಿಲ್ಲ. ಚಿದಂಬರಂ ಅವರು ಸರಿಯಾಗಿ ಸಹಕಾರ ಕೊಟ್ಟರೋ ಯಾವುದೂ ತಮ್ಮ ಗೊತ್ತಿಲ್ಲ. ಆದರೆ ಇಂತಹ ಘಟನೆ ಹಿಂದೆಂದೂ ದೇಶದಲ್ಲಿ ನಡೆದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಅವರು ಸೇಡಿನ ರಾಜಕಾರಣ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಅಂದು ಅಮಿತಾ ಶಾ ಬಂಧನ ಮಾಡಿದ್ದಕ್ಕೆ ಪ್ರತಿಯಾಗಿ ಇಂದು ಪಿ ಚಿದಂಬರಂ ಅವರನ್ನ ಬಂಧಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ನನಗೆ ಗೊತ್ತಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಊಹಾ ಪೋಹಾ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ಶಾಸಕ ಉಮೇಶ್ ಕತ್ತಿ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಉಮೇಶ್ ಕತ್ತಿ ಭೇಟಿ ವಿಚಾರವನ್ನು ತಳ್ಳಿ ಹಾಕಿದರು. ಇಂತಹ ಊಹಾಪೋಹ ಸುದ್ದಿಗಳಿಗೆ ನಾನು ಉತ್ತರ ಕೊಡಲ್ಲ. ನಮ್ಮದು ಸಣ್ಣ ಪಕ್ಷ ಅದನ್ನು ಕಟ್ಟಿಕೊಂಡು ಹೋಗುತ್ತೇವೆ. ನಮ್ಮನ್ನು ಬಿಟ್ಟು ಬಿಡಿ ಎಂದು ನಗು ಮುಖದಲ್ಲೇ ಹೇಳಿ ಕಚೇರಿ ಒಳಗೆ ಧಾವಿಸಿದರು.