ಬೆಂಗಳೂರು: ಕೊರೊನಾ ಮೂರನೇ ಅಲೆ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಮುನ್ನೆಚ್ಚರಿಕೆಯಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನ ಕಳುಹಿಸುತ್ತಿದೆ. ಸುಮಾರು ಒಂದು ತಿಂಗಳ ಹಿಂದೆ ಆಮ್ಲಜನಕ ಇಲ್ಲದೆ ಸಾವಿರಾರು ಸೋಂಕಿತರು ಉಸಿರು ಚೆಲ್ಲಿದ್ದರು. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸುಮಾರು 2,784 ಟನ್ ಪ್ರಾಣವಾಯುವನ್ನು ಕಳುಹಿಸಿದೆ.
24ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ನಿನ್ನೆ ರಾತ್ರಿ 11:45ಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋವನ್ನು ತಲುಪಿದೆ. ಜೂನ್ 1ರಂದು ಸಂಜೆ 06:45ಕ್ಕೆ ಗುಜರಾತ್‌ನ ಕಾನಾಲಸ್‌ನಿಂದ ಲೋಡ್ ಆಗಿ ಟ್ರೈನ್ ಹೊರಟಿತ್ತು.
ಈ ರೈಲು 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 110.84 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ. ಇಲ್ಲಿಯವರೆಗೆ ಕರ್ನಾಟಕವು ರೈಲ್ವೆ ಮೂಲಕ 2784.47 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ.
ಭಾರತೀಯ ರೈಲ್ವೆ ಇದುವರೆಗೆ 344 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ನಡೆಸಿದ್ದು, 1405 ಟ್ಯಾಂಕರ್‌ಗಳಲ್ಲಿ 23,741 ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರವನ್ನು ನೀಡಿದೆ.