ಬೆಂಗಳೂರು : ಕರ್ನಾಟಕದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ನಮ್ಮದೇ ಸರ್ಕಾರ ಬರುತ್ತದೆ. ಈಗ ಮಾಡಿದ ಸರ್ವೆಗಳಲ್ಲಿ ನಾವೇ ನಂಬರ್ ಒನ್ ಎಂದು ಸಚಿವ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಆರು ತಿಂಗಳಲ್ಲಿ ಪಕ್ಷದಿಂದ ನಾಲ್ಕು ಸರ್ವೆ ಆಗಿದೆ. ಜಾತಿವಾರು, ಏರಿಯಾವಾರು, ಅಭ್ಯರ್ಥಿಗಳ ವಾರು ಸರ್ವೆ ಕೂಡ ನಡೆಯುತ್ತಿದೆ. ಅದರ ಆಧಾರದ ಮೇಲೆ ಟಿಕೆಟ್ ಆಯ್ಕೆ ಆಗುತ್ತದೆ. ನಮ್ಮಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಷ್ಟೇ. ನಮ್ಮಲ್ಲಿ ವಂಶಪಾರಂಪರ್ಯ ಇಲ್ಲ. ಹೀಗಾಗಿ ಗೆಲ್ಲುವಂತವರಿಗೆ ಅಷ್ಟೇ ಟಿಕೆಟ್. ಬಹುತೇಕ ಬೆಂಗಳೂರಿನ ಹಾಲಿ ಶಾಸಕರಿಗೆ ಟಿಕೆಟ್ ಸಿಗಬಹುದು ಎಂದರು.
ನಾವು ಕಾಂಗ್ರೆಸ್ನ್ನು ಕಿತ್ತು ಹಾಕುತ್ತೇವೆ- ಸಚಿವ ಅಶೋಕ್ : ನಾವು ಅಧಿಕಾರಕ್ಕೆ ಬಂದರೇ ಬಿಜೆಪಿ ಯೋಜನೆಗಳನ್ನು ಕಿತ್ತು ಹಾಕುತ್ತೇವೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ಅವರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ನಾವು ಕಾಂಗ್ರೆಸ್ ಅನ್ನು ಕಳೆಯ ಗಿಡದ ರೀತಿ, ಕಾಂಗ್ರೆಸ್ ಅನ್ನೇ ಕಿತ್ತು ಹಾಕುತ್ತೇವೆ. ಅವರು ನಮ್ಮ ಯೋಜನೆ ಕಿತ್ತು ಹಾಕಲು ಸಾಧ್ಯವಿಲ್ಲ. ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಆರ್. ಅಶೋಕ್ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಇರೋವರೆಗೂ ಅವರು ಬಿಜೆಪಿ ಪಕ್ಷಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಮುಂದೆ ನಾವೇ ಅಧಿಕಾರಕ್ಕೆ ಬರೋದು. ಇದನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬರೆದು ಇಟ್ಟುಕೊಳ್ಳಲಿ. ಅವರು ಅಧಿಕಾರಕ್ಕೆ ಯಾವುದೇ ಕಾರಣಕ್ಕೂ ಬರುವುದಕ್ಕೆ ನಾವು ಬಿಡಲ್ಲ ಎಂದು ಹೇಳಿದರು.
ಪಕ್ಷ ಬಿಟ್ಟು ಯಾರೂ ಹೋಗಲ್ಲ : ನಮ್ಮ ಪಕ್ಷ ಬಿಟ್ಟು ಯಾರೂ ಕಾಂಗ್ರೆಸ್ಗೆ ಹೋಗಲ್ಲ. ನಮ್ಮಲ್ಲಿಗೆ ಬಂದವರೆಲ್ಲ ನಮ್ಮಲ್ಲೇ ಇರುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿಶ್ವಾಸ ಹೋಗಿದ್ದು, ಇಂತಹ ಸಂದರ್ಭದಲ್ಲಿ ಬೇರೆಯವರು ಯಾರೂ ಹೋಗಲ್ಲ. ಅವರಲ್ಲಿರೋರ ಮೇಲೆ ವಿಶ್ವಾಸ ಇಲ್ಲ. ಇಲ್ಲಿಂದ ಯಾರೂ ಹೋಗಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಮೀಸಲಾತಿ ಜಾರಿಯಾಗುತ್ತದೆ : ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಮೀಸಲಾತಿ ಸಂಬಂಧ ಕ್ಯಾಬಿನೆಟ್ ನಿರ್ಧಾರ ಆಗಿದ್ದು, ಕ್ಯಾಬಿನೆಟ್ ನಿರ್ಧಾರಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ. ಅಲ್ಪಸಂಖ್ಯಾತರ ಮತ ಪಡೆಯಲು ಕಾಂಗ್ರೆಸ್ ಜೆಡಿಎಸ್ ಮಧ್ಯೆ ಫೈಟ್ ಇದೆ. ಆ ಪೈಪೋಟಿಗಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾವು ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ಅವರಿಗೆ ಬೇರೆ ಕಡೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಸಚಿವರು ಹೇಳಿದರು. ಬಳಿಕ ಕಾಂಗ್ರೆಸ್ ಅವಧಿಯ ಅಕ್ರಮಗಳ ತನಿಖೆ ವಿಚಾರವಾಗಿ ಮಾತನಾಡುತ್ತಾ, ಯಾವಾಗ ಯಾವ ತನಿಖೆ ಮಾಡಬೇಕೋ ಮಾಡುತ್ತಾರೆ. ಸಿಎಂ ಅದರ ಬಗ್ಗೆ ಗಮನ ಹರಿಸಿದ್ದು, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ನಾನು ಅನಂತ್ ಕುಮಾರ್ ಅವರ ಅಭಿಮಾನಿ : ಕೇಂದ್ರದ ಮಾಜಿ ಸಚಿವ ದಿ. ಅನಂತ್ ಕುಮಾರ್ ಅವರ ಪುತ್ರಿಯ ಟ್ವೀಟ್ ಬೇಸರಕ್ಕೆ ಪ್ರತಿಕ್ರಿಯಿಸುತ್ತ, ಅವರು ನಮ್ಮ ಹಿರಿಯ ನಾಯಕರಾಗಿದ್ದವರು. ನನ್ನ ಕ್ಷೇತ್ರದಲ್ಲಿ ರಸ್ತೆಗೆ ಅನಂತ್ ಕುಮಾರ್ ಹೆಸರು ಇಟ್ಟಿದ್ದೇನೆ. ಸತೀಶ್ ರೆಡ್ಡಿ ಸಹ ಅವರ ಕ್ಷೇತ್ರದಲ್ಲಿ ರಸ್ತೆಗೆ ಅನಂತ್ ಕುಮಾರ್ ಅವರ ಹೆಸರು ಇಟ್ಟಿದ್ದಾರೆ. ದೇವನಹಳ್ಳಿಯಲ್ಲಿ ಅವರ ಹೆಸರಿನ ಪ್ರತಿಷ್ಠಾನಕ್ಕೆ ಜಾಗ ಕೊಡಲಾಗಿದೆ. ಅವರ ಮಗಳು ವಿಜೇತ ಅನಂತ್ ಕುಮಾರ್ ಅವರಿಗೆ ಇದರ ಮಾಹಿತಿ ಇಲ್ಲದೆ ಇರುವ ಕಾರಣ ನಾವು ಮಾಹಿತಿ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಆರ್. ಅಶೋಕ್ ಹೇಳಿದರು. ಹಾಗೂ ಈ ಬಾರಿ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರ ಕುಟುಂಬಕ್ಕೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅವರು ನಮ್ಮ ಹಿರಿಯ ನಾಯಕರು, ಅವರು ಸದಾ ನಮ್ಮ ಸ್ಮರಣೆಯಲ್ಲಿ ಇರುತ್ತಾರೆ ಎಂದರು.
ಗೆಲ್ಲಲು ತಾಕತ್ ಇಲ್ಲದೆ ಎರಡೂ ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದಾರೆ- ಸಚಿವ ಅಶೋಕ್ : ಸಿದ್ದರಾಮಯ್ಯ ಗೆಲ್ಲಲು ತಾಕತ್ ಇಲ್ಲದೆ ಎರಡು ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದಾರೆ. ಸಿದ್ದರಾಮಯ್ಯ ಅವರು ನನಗೆ ಗೊತ್ತಿರೋ ಪ್ರಕಾರ ಕೊನೆ ಚುನಾವಣೆ ಅನ್ನುತ್ತಿದ್ದಾರೆ. ಕಳೆದ ಬಾರಿ ಕೂಡ ಕೊನೆ ಚುನಾವಣೆ ಎಂದು ಕೆಲವೇ ವಟ್ಗಳ ಅಂತರದಲ್ಲಿ ಗೆದ್ದರು. ಅನ್ನ ಭಾಗ್ಯ, ಆ ಭಾಗ್ಯ, ಈ ಭಾಗ್ಯ ಅಂತೆಲ್ಲಾ ಹೇಳಿದರು. ಈಗ ಕ್ಷೇತ್ರ ಇಲ್ಲದೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸಚಿವ ಅಶೋಕ್ ಟೀಕಿಸಿದರು.
ಇದನ್ನೂ ಓದಿ : ಶೀಘ್ರದಲ್ಲೇ ಬೆಂಗಳೂರು-ಮುಂಬೈ, ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು: ಸಚಿವ ಸೋಮಣ್