ಬೆಂಗಳೂರು:ನಮ್ಮ ಮೆಟ್ರೋ ಸಂಸ್ಥೆಯೂ ಮೂರನೆಯ ಹಂತದಲ್ಲಿ ನಾಲ್ಕು ಹೊಸ ಮೆಟ್ರೋ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಿದೆ. ವೈಟ್‌ಫೀಲ್ಡ್ ನಿಂದ ಹೊಸಕೋಟೆ, ಬನ್ನೇರುಘಟ್ಟದಿಂದ ಜಿಗಣಿ, ಎಂಜಿ ರಸ್ತೆಯಿಂದ ಹೋಪ್ ಫಾರ್ಮ್ ಜಂಕ್ಷನ್ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ನಾಗವಾರ ನಡುವಿನ ಮೆಟ್ರೋ ಮಾರ್ಗಗಳನ್ನು ಮೆಟ್ರೋ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ 13 ಕಿ ಲೋ ಮೀಟರ್ ಮೆಟ್ರೋ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಸಿಎಂಆರ್‌ಎಸ್ ತಂಡ ಪರಿಶೀಲನೆ ನಡೆಸುತ್ತಿದೆ. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರ ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ನಿಲ್ದಾಣ ಸೇರಿದಂತೆ 12 ಮೆಟ್ರೋ ನಿಲ್ದಾಣಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16,328 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಕೆಆರ್ ಪುರಂ ನಿಂದ ವೈಟ್‌ಫೀಲ್ಡ್ ಮಾರ್ಗದ ಕಾರ್ಯಾಚರಣೆಗಳು ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ನಾಮಫಲಕ ದೋಷ ನಿವಾರಣೆಗೆ ಮುಂದಾದ ಬಿಎಂಆರ್‌ಸಿಎಲ್: ನಮ್ಮ ಮೆಟ್ರೋದ ನೂತನ ನಿಲ್ದಾಣ ಕೆ.ಆರ್.ಪುರಂ ಹೆಸರು ಕೆ.ಆರ್.ಪುರವಾಗಿ ಬದಲಾಗಲಿದೆ. ಕನ್ನಡಪರ ಸಂಘಟನೆಗಳ ಒತ್ತಾಯದ ಮೇರೆಗೆ ಬಿ.ಎಂ.ಆರ್.ಸಿ.ಎಲ್ ನಾಮಫಲಕದ ದೋಷ ನಿವಾರಿಸಲು ಮುಂದಾಗಿದೆ. ಕೃಷ್ಣರಾಜ ಒಡೆಯರ್ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಅನ್ಯ ಭಾಷೆಯ ಪ್ರಭಾವದಿಂದಾಗಿ ಹೆಸರನ್ನು ತಪ್ಪಾಗಿ ಬಳಸಲಾಗುತ್ತಿದೆ. ನಮ್ಮ ಮೆಟ್ರೋ ಕೂಡ ಇದನ್ನೇ ಅನುಸರಿಸಿದೆ. ತಕ್ಷಣ 'ಪುರಂ' ಎಂಬುದನ್ನು ತೆಗೆದು 'ಪುರ' ಎಂದು ಬದಲಾಯಿಸಬೇಕು ಎಂದು ಕನ್ನಡಪರ ಸಂಘಟನೆಗಳು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿವೆ.
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಂಡಿ ಅಂಜುಮ್ ಪರ್ವೇಜ್ ನಿಲ್ದಾಣದಲ್ಲಿ 'ಕೆ.ಆರ್.ಪುರ' ಎಂದು ನಾಮಫಲಕ ಬದಲಿಸಲು ಸೂಚಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷತೆಗೆ ಐಐಎಸ್ಸಿ ತಂಡ ನಿಯೋಜನೆ: ನಮ್ಮ ಮೆಟ್ರೋ ಮಾರ್ಗಗಳ ನಿರ್ಮಾಣದ ಸುರಕ್ಷತೆಗಾಗಿ ಐಐಎಸ್ಸಿ ತಂಡದ ನಿಯೋಜಿಸಲಾಗಿದೆ. ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ನಮ್ಮ ಮೆಟ್ರೋ ಸಂಸ್ಥೆ ( ಬಿ.ಎಂ.ಆರ್.ಸಿ.ಎಲ್) ಭಾರತೀಯ ವಿಜ್ಞಾನ ಸಂಸ್ಥೆಯ ( ಐ.ಐ.ಎಸ್.ಸಿ) ತಂಡವೊಂದನ್ನು ನಿಯೋಜನೆ ಮಾಡಿದೆ. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರ ಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಹಾಗೂ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡಿದ ರಮೇಶ್ ಬಾಬು ನಾರಾಯಣಪ್ಪ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಇದನ್ನೂಓದಿ:ನೈಋತ್ಯ ರೈಲ್ವೆ ಸಿಬ್ಬಂದಿಯಿಂದ ಬೆಂಗಳೂರು ಮೈಸೂರು ಮಾರ್ಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ..