ಬೆಂಗಳೂರು: ದಲಿತ ಹಾಗೂ ಹಿಂದುಳಿದ ಸಂಘಟನೆಗಳಲ್ಲಿನ ಒಡಕಿನಿಂದಾಗಿ ಅನ್ಯರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಂಘಟನೆ ಕೊರತೆ ಹಾಗೂ ಒಳ ಜಗಳದಿಂದಾಗಿ ಸಮಸ್ಯೆ ಆಗುತ್ತಿದೆ. ಯಾರಿಗೂ ಒಂದೇ ಸಂಘಟನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.
ಪಾಲಿಕೆಯ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಸಭಾಂಗಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಪೌರಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೌರಕಾರ್ಮಿಕರ ವೇತನ ಹಾಗೂ ಸೌಲಭ್ಯ ಹೆಚ್ಚು ಮಾಡಿತ್ತು. ಈ ಹಿಂದೆ ಗುತ್ತಿಗೆದಾರರು ಭಿಕ್ಷೆ ರೀತಿ ಸಂಬಳ ನೀಡುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಉತ್ತಮವಾದ ಸೌಲಭ್ಯಗಳನ್ನು ರಾಜ್ಯದಲ್ಲಿರುವ ಪೌರಕಾರ್ಮಿಕರಿಗೆ ನೀಡಲಾಗಿದೆ. ನೇರ ವೇತನ ನೀಡಿ ಗುತ್ತಿಗೆದಾರರ ಕಿರುಕುಳ ತಪ್ಪಿಸಲಾಗಿದೆ ಎಂದರು.
ಓದಿ: ನಾಸಾ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಮಹಿಳೆ ಆಯ್ಕೆ
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರನ್ನು ಕೆಲವರು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಇಂದಿನ ಯುವಕರಿಗೆ ನಮ್ಮ ಸಂವಿಧಾನದ ಬಗ್ಗೆ ಹಾಗೂ ಇತಿಹಾಸದ ಬಗ್ಗೆ ತಿಳುವಳಿಕೆ ನೀಡಬೇಕು ಎಂದರು.
ಈ ವೇಳೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾದಿಗ ಹಾಗೂ ನಗರದ ಪೌರಕಾರ್ಮಿಕರು ಹಾಜರಿದ್ದರು.