ಬೆಂಗಳೂರು: ಲಕ್ಷಾಂತರ ರೂ. ಬೆಲೆಯ ಎರಡು ಚಿನ್ನದ ಬಳೆಗಳನ್ನು ಕೊಳ್ಳುವ ನೆಪದಲ್ಲಿ ಆರ್ಡರ್ ಮಾಡಿ ಮನೆಗೆ ಕೊಡಲು ಬಂದಿದ್ದ ವ್ಯಕ್ತಿಯಿಂದಲೇ ಬಳೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಆಯೇಷಾ, ಸೆಂಥಿಲ್ ಹಾಗೂ ಇಮ್ರಾನ್ ಪರಾರಿ ಆಗಿರುವ ಆರೋಪಿಗಳು. ನಗರದಲ್ಲಿ ಹಯಗ್ರೀವ ಡೈಮಂಡ್ಸ್ ಹೆಸರಿನಲ್ಲಿ ಅಂಗಡಿ ಹೊಂದಿರುವ ಬಾಲಾಜಿ ಎಂಬಾತ ಚಿನ್ನಾಭರಣ ಮಾರಾಟ ಹಾಗೂ ಅವುಗಳಿಗೆ ಹಾಲ್‌ಮಾರ್ಕ್ ಮಾಡಿಕೊಡುತ್ತಿದ್ದು, ಇವರ ಬಳಿ ಎಂಟು ವರ್ಷಗಳಿಂದ ಸತೀಶ್ ಎಂಬುವರು ಕೆಲಸ ಮಾಡುತ್ತಿದ್ದಾರೆ. ಆರ್ಡರ್ ಬಂದ ವಿಳಾಸಕ್ಕೆ ಚಿನ್ನಾಭರಣ ಕೊಟ್ಟು, ಹಣ ಪಡೆದುಕೊಂಡು ಬರುವುದು ಸತೀಶ್ ಕೆಲಸ.
ನ.15ರಂದು ಆರೋಪಿ ಆಯಿಷಾ, ಸೆಂಥಿಲ್ ಮೂಲಕ ಫೋನ್ ಮಾಡಿಸಿ ಒಂದು ಜೊತೆ ಚಿನ್ನದ ಬಳೆ ಬೇಕು ಎಂದಿದ್ದಳು. ಸತೀಶ್‌ಗೆ ಸೆಂಥಿಲ್ ಪರಿಚಯವಿದ್ದರಿಂದ ಆಕೆಯ ಜೊತೆ ವ್ಯವಹಾರಕ್ಕೆ ಒಪ್ಪಿ, ವಾಟ್ಸಪ್ ಮೂಲಕ ಚಿನ್ನದ ಬಳೆಗಳ ಫೋಟೋಗಳನ್ನು ಕಳುಹಿಸಿದ್ದರು. ಈ ವೇಳೆ ಆಕೆ, 20 ಕ್ಯಾರೆಟ್ ಚಿನ್ನದ ಬಳೆಗಳ ಬೆಲೆ ಕುರಿತು ವಿಚಾರಿಸಿದ್ದಳು. ಡೈಮೆಂಡ್ನಿಂದ ಕೂಡಿದ್ದ 61 ಗ್ರಾಂ ತೂಕದ ಬಳೆಗಳಿದ್ದು, 10 ಲಕ್ಷ ರೂ. ಆಗುತ್ತದೆ ಎಂದು ಅಂಗಡಿ ಮಾಲೀಕ ತಿಳಿಸಿದ್ದರು.
ಇದನ್ನು ಓದಿ..ಪ್ರಿಯಕರನಿಗಾಗಿ ಮತಾಂತರಗೊಂಡು ಅತಂತ್ರಳಾದ ಮಹಿಳೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಹೆಚ್ಪಿ
ಅವುಗಳನ್ನು ಕಳುಹಿಸಿಕೊಡಿ. ಪರಿಶೀಲಿಸಿ ಹಣ ಕೊಡುತ್ತೇವೆ ಎಂದು ಆಯಿಷಾ ಹೇಳಿದ್ದಳು ಎನ್ನಲಾಗ್ತಿದೆ. ಅದರಂತೆ, ಸೆಂಥಿಲ್ ವಿಳಾಸದ ಲೊಕೇಷನ್ ಕಳುಹಿಸಿದ್ದ. ನ. 19ರಂದು ಸತೀಶ್ ಚಿನ್ನದ ಬಳೆಗಳನ್ನು ಕೊಡಲು ರಾಚೇನಹಳ್ಳಿಯ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇದ್ದ ಆಯಿಷಾ ಮನೆಗೆ ಹೋಗಿದ್ದ. ಇದೇ ವೇಳೆ ಇಮ್ರಾನ್ ಎಂಬ ಹುಡುಗ, ಅಕ್ಕ ಆಯಿಷಾ ಊಟ ಮಾಡುತ್ತಿದ್ದಾರೆ ಎಂದು ಹೇಳಿ ಕೂರಿಸಿಕೊಂಡಿದ್ದ. ಬಳಿಕ ಬಳೆ ನೋಡುತ್ತೇನೆ ಕೊಡು ಎಂದಿದ್ದ. ಆಯಿಷಾ ಸೂಚನೆ ಮೇರೆಗೆ ಸತೀಶ್ ಚಿನ್ನದ ಬಳೆಗಳನ್ನು ಇಮ್ರಾನ್‌ಗೆ ಕೊಟ್ಟಿದ್ದ. ಈ ವೇಳೆ ಹಾಲ್‌ಮಾರ್ಕ್ ಪರಿಶೀಲಿಸುವ ನೆಪದಲ್ಲಿ ಬಳೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಮಾಲೀಕ ಬಾಲಾಜಿ ನೀಡಿದ ಆಧಾರದ ಮೇಲೆ ವಂಚಕರಾದ ಆಯೇಷಾ, ಸೆಂಥಿಲ್ ಹಾಗೂ ಇಮ್ರಾನ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.