ಬೆಂಗಳೂರು : ರಾಜ್ಯದಲ್ಲಿ ಲಾಕ್ಡೌನ್, ಸೆಮಿ ಲಾಕ್ಡೌನ್ನಂತಹ ನಿಯಮ ಜಾರಿಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ಕೊರೊನಾ ನಿರ್ವಹಣೆಗೆ ತೀವ್ರ ಅಸಮಾಧಾನ ಹೊರ ಹಾಕಿವೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನೇರ ಆರೋಪ ಮಾಡಿವೆ.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಆರಂಭಗೊಂಡಿದೆ. ಸಭೆಯಲ್ಲಿ ಪ್ರತಿಪಕ್ಷಗಳ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿವೆ. ಆರೋಗ್ಯ ಸಚಿವ ಸುಧಾಕರ್ ನೀಡುತ್ತಿರುವ ಮಾಹಿತಿ ಸರಿ ಇಲ್ಲ, ಬೆಂಗಳೂರಿನಲ್ಲಿ ಬೆಡ್ ಸಿಗುತ್ತಿಲ್ಲ, ಆಮ್ಲಜನಕದ ಕೊರತೆ ಮಿತಿ ಮೀರುತ್ತಿದೆ. ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುವ ಸ್ಥಿತಿ ನಿರ್ಮಾಣವಾಗಿದೆ.
ಇಷ್ಟಾದರೂ ಸರ್ಕಾರ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವ ಡಾ. ಸುಧಾಕರ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿದೆ, ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ರೆಮ್ಡಿಸಿವಿರ್ ಔಷಧ ಕೊರತೆಯಾಗಿದೆ. ಆದರೂ ಏನೂ ಆಗಿಲ್ಲ ಅನ್ನೋವಂತೆ ಸರ್ಕಾರ ಕುಳಿತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಯಾವ ಕಾರಣಕ್ಕೂ ಲಾಕ್ಡೌನ್ ಮಾಡಬಾರದು, ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ಬಿಗಿ ಕ್ರಮಕೈಗೊಳ್ಳಿ ಅದನ್ನು ಬಿಟ್ಟು ಲಾಕ್ಡೌನ್ನಂತಹ ಯಾವುದೇ ಕೆಲಸಕ್ಕೆ ಸರ್ಕಾರ ಮುಂದಾಗಬಾರದು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಲಾಕ್ಡೌನ್ ಬಿಟ್ಟು ಬೇರೆ ಯಾವುದೇ ಕ್ರಮ ತೆಗೆದುಕೊಂಡರೂ ಬೆಂಬಲ ನೀಡಲು ಸಿದ್ಧ. ರಾಜ್ಯ ಸರ್ಕಾರಕ್ಕೆ ನಾವು ಬೆಂಬಲ ಕೊಡುತ್ತೇವೆ. ಆದರೆ, ಇವತ್ತಿನ ಪರಿಸ್ಥಿತಿ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಅಭಿವೃದ್ಧಿ ಕಾರ್ಯ ಬಿಟ್ಟು ಜನರ ರಕ್ಷಣೆ ಮಾಡಲಿ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಆ ನಿಟ್ಟಿನಲ್ಲಿ ರೂಲ್ಸ್ ತೆಗೆದುಕೊಂಡು ಬನ್ನಿ.
ಜನರಿಗೆ ತೊಂದರೆಯಾಗುವ ಯಾವುದೇ ಕ್ರಮ ಬೇಡ. ಮೊದಲೇ ಸಾಮಾನ್ಯ ಜನರು ಸಂಕಷ್ಟದಲ್ಲಿದ್ದಾರೆ. ಅಗತ್ಯಬಿದ್ದರೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಹಿತಿ ಒದಗಿಸಲು ಕಾಂಗ್ರೆಸ್ ಪಕ್ಷ ಸದಾ ಸಿದ್ಧವಿದೆ ಎಂದು ಡಿಕೆಶಿ ಅಭಿಪ್ರಾಯ ಮಂಡಿಸಿದ್ದಾರೆ.
ಜೆಡಿಎಸ್ ದ್ವಂದ್ವ : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಲಾಕ್ಡೌನ್ ಪರ ಒಲವು ವ್ಯಕ್ತಪಡಿಸಿದ್ದಾರೆ. 15 ದಿನ ಲಾಕ್ಡೌನ್ ಮಾಡಿ ಅನ್ನೋ ಸಲಹೆ ನೀಡಿದ್ದಾರೆ. ಕೈಮೀರಿರುವ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಅಗತ್ಯ ಎಂದು ತಿಳಿಸಿದ್ದಾರೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಜೆಡಿಎಸ್ನ ಮತ್ತೋರ್ವ ನಾಯಕ ಹೆಚ್ ಡಿ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ ಜಾರಿ ಮಾಡಬಾರದು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜೆಡಿಎಸ್ನಲ್ಲೇ ಲಾಕ್ಡೌನ್ ಬಗ್ಗೆ ಪರ-ವಿರೋಧದ ನಿಲುವು ವ್ಯಕ್ತವಾಗಿದೆ.
ಲಾಕ್ಡೌನ್ ವಿಚಾರಕ್ಕೆ ಸೀಮಿತವಾದ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.