ಬೆಂಗಳೂರು: ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
ಎರಡನೇ ಬಾರಿ ನಡೆಸಿದ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಳೆದ ಮಂಗಳವಾರ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದ ಎರಡು ದಿನ ಮಾತ್ರ ಜ್ವರ ಕಾಣಿಸಿಕೊಂಡಿಸಿತ್ತು. ಉಳಿದಂತೆ ಸೋಂಕಿನ ಲಕ್ಷಣ ಇರಲಿಲ್ಲ. ಸಿದ್ದರಾಮಯ್ಯ ಅವರು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಇಂದು 73ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರು ಆಸ್ಪತ್ರೆಯಲ್ಲಿರುವ ಹಿನ್ನೆಲೆ ಸಂಭ್ರಮಾಚರಣೆ ಇಲ್ಲವಾಗಿದೆ. ಕಾಂಗ್ರೆಸ್ನ ಕೆಲ ನಾಯಕರು ಮಾಜಿ ಸಿಎಂಗೆ ಶುಭಾಶಯ ಕೋರಿದ್ದಾರೆ.
ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಯಲ್ಲಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ರಾಜ್ಯಾದ್ಯಂತ ವ್ಯಾಪಿಸಿರುವ ಹಿನ್ನೆಲೆ ಹಿಂದೆಯೇ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದರು. ಆದರೆ, ಸ್ವತಃ ತಾವೇ ಕೋವಿಡ್-19 ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಹುಟ್ಟುಹಬ್ಬದ ಆಚರಣೆ ನಡೆಯುತ್ತಿಲ್ಲ.