ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ್ದ ಯೋಜನೆಗಳನ್ನು ಕೈಬಿಟ್ಟಿರುವುದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಅಭಿವೃದ್ಧಿ ಕಲ್ಯಾಣ ಮಾಡಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಸರ್ಕಾರ ಅನಗತ್ಯ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಹಿಂದೆ ಕಾಂಗ್ರೆಸ್ ಜಾರಿಗೊಳಿಸಿದ್ದ ಯೋಜನೆಗಳನ್ನು ಕೈ ಬಿಡುವ, ಇಲ್ಲವೇ ಹೆಸರು ಬದಲಿಸುವ ಕಾರ್ಯವನ್ನು ಈಗಿನ ಸರ್ಕಾರ ಮಾಡಿದೆ. ಈಗಲೂ ಸಹ ಘೋಷಿಸುತ್ತಿರುವ ಯೋಜನೆಗಳು ಕೇವಲ ಗಿಮಿಕ್ ಆಗಿದ್ದು, ಅವು ಯಾವುದೇ ರೀತಿ ಜಾರಿಗೆ ಬರುವಂತಹ ಯೋಜನೆಗಳಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾವೇಶ ದಾರಿ ತಪ್ಪಿಸುವ ಪ್ರಯತ್ನ: ಭಾನುವಾರ ಕಲಬುರಗಿಯಲ್ಲಿ ನಡೆದ ಬಿಜೆಪಿ ಪಕ್ಷ ಹಿಂದುಳಿದ ಜಾತಿಗಳ ಸಮಾವೇಶಕ್ಕೆ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು. ಅಲ್ಲಿ ಸೇರಿದ್ದು, 40 ರಿಂದ 50 ಸಾವಿರ ಜನ ಮಾತ್ರ. ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಸಿಎಂ ಯಡಿಯೂರಪ್ಪ ಅವರು ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಲ್ಲಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರು ಸಹ ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಕುರಿ , ಉಣ್ಣೆ ಮಂಡಲ ರಚಿಸಿದ್ದು ಕಾಂಗ್ರೆಸ್: ಸಮಾವೇಶದಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಸರಕಾರದಿಂದ ಕುರಿಗಾರರಿಗೆ ದೊಡ್ಡ ಯೋಜನೆ ನೀಡಿದ್ದೇವೆ. ಆ ಆದೇಶ ಇಲ್ಲಿದೆ ಎಂದು ಹೇಳಿದ್ದರು. ಆದರೆ, ಕುರಿ ಮತ್ತು ಉಣ್ಣೆ ಮಹಾಮಂಡಲ ರಚಿಸಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರ.
ಈ ಮಂಡಳಿಯ 20,000 ಅರ್ಹ ಜನರಿಗೆ 354 ಕೋಟಿ ರೂಗಳಲ್ಲಿ 20 ಕುರಿ ಮತ್ತು ಟಗರು ಒಳಗೊಂಡ ಒಂದು ಘಟಕದ ವೆಚ್ಚ 1,75,000 ನೀಡುವುದಾಗಿದೆ. ಇಂತಹ ಆದೇಶ ಸಿದ್ದರಾಮಯ್ಯ ಯಾವತ್ತೂ ಮಾಡಿರಲಿಲ್ಲ, ನಾನು ಇದು ಕುರುಬರಿಗೆ ಮಾಡಿರುವ ಉಪಕಾರ ಎಂದು ಬಸವರಾಜ ಬೊಮ್ಮಾಯಿ ಪ್ರದರ್ಶನ ತೋರಿದ್ದಾರೆ ಎಂದರು.
ತರಾತುರಿ ಆದೇಶ: 1,75,000ರೂಗಳಲ್ಲಿ ಶೇ 50ರಷ್ಟು ಹಣವನ್ನು ಎನ್ಸಿಡಿಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಶೇ 25ರಷ್ಟು ಸರ್ಕಾರದ ಸಬ್ಸಿಡಿ ಮತ್ತು ಉಳಿದ ಶೇ 25ರಷ್ಟು ಹಣವನ್ನು ಫಲಾನುಭವಿ ಹಾಕಬೇಕು. ಆದರೆ, ಭಾಷಣದಲ್ಲಿ ಉಚಿತವಾಗಿ ಎಲ್ಲರಿಗೂ ನೀಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಆದೇಶವನ್ನು 29ರಂದು ಭಾಷಣ ಮಾಡಿದ ದಿನವೇ ಸಿದ್ಧಪಡಿಸಿಕೊಂಡು ಹೋಗಿರುವುದು, ಇದನ್ನು ಸಚಿವ ಸಂಪುಟ ಸಭೆಯ ಮುಂದೆ ಕೂಡ ಇಟ್ಟಿಲ್ಲ. ತರಾತುರಿಯಲ್ಲಿ ಆದೇಶ ಮಾಡಿಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದಕ್ಕೆ ಶೇ 25ರಷ್ಟು ಹಣವನ್ನು ಕುರಿಗಾರ ಹಾಕಬೇಕು. ಆದರೆ, ಈ ಹಣವನ್ನು ಎಲ್ಲಿಂದ ತರಬೇಕು? ನನ್ನ ಪ್ರಕಾರ ಈ ಕಾರ್ಯಕ್ರಮ ಅನುಷ್ಠಾನವೇ ಆಗಲ್ಲ. ಈಗ ಗೊಲ್ಲರು ಸೇರಿದಂತೆ ಹಿಂದುಳಿದ ಜಾತಿಯ ಜನ ಕುರಿ ಸಾಕಾಣಿಕೆ ಮಾಡುತ್ತಾರೆ. ನಮ್ಮ ಕಾಲದಲ್ಲಿ ಪಶುಭಾಗ್ಯ ಯೋಜನೆ ಜಾರಿ ಮಾಡಿದ್ದೆವು. ಇದರಡಿ 1,20,000 ಹಣವನ್ನು ಎಮ್ಮೆ, ಹಸು, ಕುರಿ, ಮೇಕೆ ಸಾಕಾಣಿಕೆ ಮಾಡುವವರಿಗಾಗಿ ನೀಡಲಾಗುತ್ತಿತ್ತು.
ಈಗ ಈ ಕಾರ್ಯಕ್ರಮ ಎಲ್ಲಿದೆ? ಪಶು ಸಂಗೋಪನಾ ಸಚಿವರಾಗಿದ್ದ ಎ. ಮಂಜು ಈಗ ಬಿಜೆಪಿಯಲ್ಲಿ ಇದ್ದಾರೆ, ಈಗ ಪಶುಭಾಗ್ಯ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನನ್ನ ಪ್ರಕಾರ ಈ ಯೋಜನೆ ಟೇಕ್ ಆಫ್ ಆಗುವ ಲಕ್ಷಣವೇ ಇಲ್ಲ. ಇದನ್ನು ಪ್ರಚಾರ ಮಾಡಲಾಗಿದೆ ಅಷ್ಟೆ ಎಂದರು.
ಕುರುಬರನ್ನು ಸಚಿವರನ್ನಾಗಿಸಿಲ್ಲ ಎಂಬ ಆರೋಪ ಸುಳ್ಳು: ಸಿದ್ದರಾಮಯ್ಯ ಅವರ ಸರ್ಕಾರ ಕುರುಬರನ್ನು ಸಚಿವರನ್ನಾಗಿ ಮಾಡಲೇ ಇಲ್ಲ ಎಂದು ಆರೋಪ ಮಾಡಿದ್ದಾರೆ. ಹೆಚ್,ಎಂ ರೇವಣ್ಣ, ಹೆಚ್,ವೈ ಮೇಟಿ ಮಂತ್ರಿಯಾಗಿದ್ದು ಯಾರ ಸರ್ಕಾರದಲ್ಲಿ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ? ಈ ತರಹ ಯಾಕೆ ಸುಳ್ಳು ಹೇಳಬೇಕಪ್ಪ?
ಮರಾಠ ಜಾತಿಯ ಸಂತೋಷ್ ಲಾಡ್, ನೇಕಾರ ಜನಾಂಗದ ಉಮಾಶ್ರೀ, ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಬಾಬುರಾವ್ ಚಿಂಚನಸೂರ್, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದ ಜಾತಿಗಳಿಗೆ ಸೇರಿದವರಲ್ವಾ? ಮುಖ್ಯಮಂತ್ರಿ ನಾನು ಕುರುಬ ಜಾತಿಯವನಲ್ಲ? ಆದರೂ ಬಿಜೆಪಿಯವರು ಕುರುಬರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಎನ್ನುತ್ತಿದ್ದಾರೆ.
ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ನಲ್ಲಿ ಮಾತ್ರ. ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಎಂದು ಬಿಜೆಪಿಗೆ ಸಿದ್ದರಾಮಯ್ಯ ಸವಾಲು ಹಾಕಿದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಬೀದರ್, ಯಾದಗಿರಿ, ಕಲಬುರಗಿಯಲ್ಲಿರುವ ಗೊಂಡ ಸಮುದಾಯ ( ಕುರುಬ ಜಾತಿಯ ಜನ) ಹಾಗೂ ಕೊಡಗಿನ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಮೋದಿ ಅವರು ಪ್ರಧಾನಿಯಾಗಿ 8 ವರ್ಷ ಆಗಿದೆ, ಯಾಕೆ ಅವರನ್ನು ಎಸ್ಟಿ ಪಟ್ಟಿಗೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೊಂದು ಬದ್ಧತೆ ಇದ್ದರೆ ಈ ಕೂಡಲೆ ಈ ಸಮಾಜಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಲಿ. ಬೆಸ್ತ ಜಾತಿಯವರನ್ನು, ಕಾಡುಗೊಲ್ಲರನ್ನು ಎಸ್,ಟಿ ಗೆ ಸೇರಿಸುವಂತೆ ನಮ್ಮ ಸರ್ಕಾರ ಶಿಫಾರಸು ಮಾಡಿದೆ. ಅದನ್ನು ಮಾಡಿಸಿ. ಅವುಗಳನ್ನು ಮಾಡುವುದು ಬಿಟ್ಟು ಸಮಾಜಿಕ ನ್ಯಾಯದ ಬಗ್ಗೆ ಸುಳ್ಳು ಭಾಷಣ ಮಾಡಿದ್ರೆ ಸಾಕಾ? ಎಂದು ಕೇಳಿದರು.
ನಾಗಮೋಹನ್ ದಾಸ್ ಸಮಿತಿ ರಚನೆಗೆ ವಿಳಂಬ : ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ. ಈ ಸಮಿತಿ ವರದಿ ನೀಡಿದ್ದು 2-7-2020ರಲ್ಲಿ. ವರದಿ ಬಂದ ತಕ್ಷಣ 24 ಗಂಟೆಗಳಲ್ಲಿಈ ವರದಿ ಜಾರಿ ಮಾಡ್ತೀವಿ ಎಂದು ರಾಮುಲು ಹೇಳಿದ್ದರು, ಆದರೆ ಎರಡು ವರ್ಷ ಮೂರು ತಿಂಗಳು ಸರ್ಕಾರ ಮತ್ತು ರಾಮುಲು ಸುಮ್ಮನಿದ್ದುದ್ದು ಯಾಕೆ? ಎಂದು ಮಾಜಿ ಸಿಎಂ ಪ್ರಶ್ನಿಸಿದರು.
ಸರ್ವಪಕ್ಷಗಳ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಿಗೆ ಒಂದು ಕಾಯ್ದೆ ಮಾಡಿ, ಅದನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಿ ಎಂದು ಹೇಳಿದ್ದೆ. ಅದನ್ನು ಬಿಟ್ಟು ಒಂದು ಸುಗ್ರೀವಾಜ್ಞೆ ಹೊರಡಿಸಿಕೊಂಡು ಕೂತಿದ್ದಾರೆ. ಒಂದು ವೇಳೆ, ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಏನಾಗುತ್ತೆ? ಇದಕ್ಕೆ ಕಾನೂನಿನ ರಕ್ಷಣೆ ಇದೆಯಾ? ನನ್ನ ಪ್ರಕಾರ ಈ ಸರ್ಕಾರ ಒಂದು ಕಾಯ್ದೆ ಮಾಡಿ ಅದನ್ನು ಮೋದಿ ಅವರ ಬಳಿ ಕೂತು ಮಾತನಾಡಿ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ಇದ್ದಾಗ 2017- 18ರಲ್ಲಿ 374 ಕೋಟಿ ಅನುದಾನ ನೀಡಿದ್ದೆ. ಈಗಿನ ಸರ್ಕಾರ 100 ಕೋಟಿ ಹಣ ಕೊಡುವುದಾಗಿ ಹೇಳಿದೆ ಬಿಟ್ಟರೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮತ್ತೆ 200 ಕೋಟಿ ಗೆ ಹೆಚ್ಚಳ ಮಾಡಿದ್ದಾರೆ. ಆದರೂ 174 ಕೋಟಿ ಅನುದಾನ ಕೊರತೆ ಆಯ್ತಲ್ವಾ? ಯಾಕೆ ಇದನ್ನು ಕಡಿಮೆ ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
27 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದ ಕಾಂಗ್ರೆಸ್: ಬಿಜೆಪಿ ಸರ್ಕಾರ ಗಂಗಾ ಕಲ್ಯಾಣ ಯೋಜನೆಯಡಿ ನಮ್ಮ ಸರ್ಕಾರ ಹಿಂದುಳಿದ ಜಾತಿಗಳ ಜನರ 80,000 ಎಕರೆ ಪ್ರದೇಶಕ್ಕೆ ಬೋರ್ ವೆಲ್ ತೋಡಿಸಿಕೊಟ್ಟು ನೀರಾವರಿ ಸೌಲಭ್ಯ ನೀಡಿದ್ದೆವು. ಹಿಂದುಳಿದ ಜಾತಿಗಳು ಪಡೆದಿದ್ದ ಮನೆ ಸಾಲ 514 ಕೋಟಿ 26 ಲಕ್ಷವನ್ನು ಸಂಪೂರ್ಣ ಮನ್ನಾ ಮಾಡಿದ್ದೆ.
27 ಲಕ್ಷ ರೈತರ 50,000 ವರೆಗಿನ ಸಾಲ ಮನ್ನಾ ಮಾಡಿದ್ದೆ, ನೇಕಾರರ ಪವರ್ ಲೂಮ್ ಗಳಿಗೆ 4 ರೂ. 75 ಪೈಸೆ ವಿಧಿಸಲಾಗುತ್ತಿದ್ದ ವಿದ್ಯುತ್ ಯುನಿಟ್ ದರವನ್ನು 1 ರೂಪಾಯಿ 20 ಪೈಸೆಗೆ ಇಳಿಸಿದ್ದು ನಾನು. ಅವರ 50,000 ವರೆಗಿನ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಈ ಬಿಜೆಪಿ ಸರ್ಕಾರ ಏನು ಮಾಡಿದೆ? ಹಿಂದುಳಿದ ಜಾತಿಗಳ ಸಮಾವೇಶ ಮಾಡಿ, ನನ್ನನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ವೇದಿಕೆ ಮೇಲೆಯಾದರೂ ಸರಿ ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ, ನಮ್ಮ ಸರ್ಕಾರ ಏನು ಮಾಡಿದೆ ಹೇಳುತ್ತೇನೆ, ಈ ಬಗ್ಗೆ ಬಹಿರಂಗ ಚರ್ಚೆಗೂ ಬರಲಿ ಎಂದು ಪಂಥಾಹ್ವಾನ ನೀಡಿದರು.
ಅನುಗ್ರಹ ಯೋಜನೆ ನಾಪತ್ತೆ: ಅನುಗ್ರಹ ಯೋಜನೆಯನ್ನು 2013ರಲ್ಲಿ ರೂಪಿಸಿ, 2017ರಲ್ಲಿ ಅದನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದೆವು. ಕುರಿ ಅಥವಾ ಮೇಕೆ ಸತ್ತರೆ 5,000, ಎಮ್ಮೆ ಅಥವಾ ಹಸು ಸತ್ತರೆ 10,000 ಪರಿಹಾರ ನೀಡಲಾಗುತ್ತಿತ್ತು. ಈಗ ಈ ಕಾರ್ಯಕ್ರಮ ಇದೆಯಾ? ವಿದ್ಯಾಸಿರಿ ಯೋಜನೆ ಅಡಿ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ 1,500 ರೂಪಾಯಿ ನೀಡಲಾಗುತ್ತಿತ್ತು. ಇದರಿಂದ 4.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.
ಈಗ ಈ ಯೋಜನೆ ಇದೆಯಾ? ನಿಲ್ಲಿಸಿದ್ದು ಯಾಕೆ? ಇದರ ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುವ ಅನುದಾನ ಕಡಿಮೆ ಮಾಡಲಾಗಿದೆ. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ. ಹಿಂದುಳಿದ ಜಾತಿಗಳಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿ ಆದ ಅನ್ಯಾಯ ಬೇರೆ ಯಾವ ಸರ್ಕಾರದಿಂದಲೂ ಆಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ದೇವರಾಜ ಅರಸು ಆಶ್ರಯ ಯೋಜನೆ ನಿರ್ಲಕ್ಷ್ಯ: ಈ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾದರೂ ಹಿಂದುಳಿದ ಜಾತಿಗಳಿಗೆ ನೀಡುವ ಅನುದಾನ ಕಡಿಮೆಯಾಗುತ್ತಾ ಹೋಗಿದೆ. ಇದು ಹಿಂದುಳಿದ ಜಾತಿಗಳ ವಿರೋಧಿ ಸರ್ಕಾರ. ಹಿಂದೆ ಕಾಂಗ್ರೆಸ್ ಸರ್ಕಾರ ದೇವರಾಜ ಅರಸು ಆಶ್ರಯ ಯೋಜನೆ ಜಾರಿಗೆ ತಂದು 35,000 ಮನೆಗಳನ್ನು ಕಟ್ಟಿಕೊಟ್ಟಿದ್ದೆವು. ಬಿಜೆಪಿ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಹಿಂದುಳಿದ ಜಾತಿಗಳಿಗೆ ಮಕ್ಮಲ್ ಟೋಪಿ ಹಾಕುತ್ತಿದೆ. ಹಿಂದುಳಿದ ವರ್ಗಗಳಲ್ಲಿ 5 ರಿಂದ ಶೇ 10ರಷ್ಟು ಜನ ಬಿಜೆಪಿ ಜತೆ ಇರಬಹುದು. ಇದು ಕೂಡ ಮೀಸಲಾತಿ ಜಾರಿಯಾದ ಮೇಲೆ ಆಗಿರುವುದು. 2004ರಲ್ಲಿ ಬಂಗಾರಪ್ಪನವರು ಬಿಜೆಪಿ ಸೇರದೇ ಇದ್ದಿದ್ದರೆ ಬಿಜೆಪಿ 40-50 ಸೀಟಷ್ಟೇ ಗೆಲ್ಲುವ ಸ್ಥಿತಿಯಲ್ಲಿ ಇರುತ್ತಿತ್ತು. ಬಂಗಾರಪ್ಪ ನವರು ಬಿಜೆಪಿ ಸೇರಿದಾಗ ಅವರ ಜೊತೆಗೆ ಹೋದ ಮತದಾರರು ಬಂಗಾರಪ್ಪ ಬಿಜೆಪಿ ಬಿಟ್ಟರೂ ಮತದಾರರು ಬಿಜೆಪಿ ತೊರೆಯಲೇ ಇಲ್ಲ ಎಂದರು.
ಇಂದಿರಾ ಕ್ಯಾಂಟೀನ್ ನಿರ್ಲಕ್ಷ್ಯ: ಅನುದಾನದ ಕೊರತೆಯಿಂದ 40 ಇಂದಿರಾ ಕ್ಯಾಂಟೀನ್ ಗಳನ್ನು ನಿಲ್ಲಿಸಲಾಗಿದೆ. ಈ ಕ್ಯಾಂಟೀನ್ ಗಳು ಇರುವುದು ಬಡವರು, ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ. ಅದನ್ನೇ ನಿಲ್ಲಿಸಿದ್ದಾರೆ ಎಂದರೆ ಈ ಸರ್ಕಾರ ಬಡವರ ಪರವಾಗಿ ಇಲ್ಲ ಎಂದು ಅರ್ಥ.
ಬೆಂಗಳೂರಿನ 198 ವಾರ್ಡ್ ಗಳಲ್ಲಿ 198 ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪನೆ ಮಾಡಿದ್ದೆವು, ಇದು ಅವೈಜ್ಞಾನಿಕ ಹೇಗಾಗುತ್ತದೆ? ಕೆಲವು ಕ್ಯಾಂಟೀನ್ ಹತ್ತಿರ ಇದೆ ಎಂಬ ಕಾರಣಕ್ಕೆ ಅದನ್ನು ನಿಲ್ಲಿಸಬೇಕು ಅಂತ ಇದೆ? ನಂದೀಶ್ ಅವರ ವರ್ಗಾವಣೆ ಮಾಡಲು ಹಣ ಪಡೆದಿರುವವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಅಥವಾ ಗೃಹಸಚಿವರು ಅಥವಾ ಸ್ಥಳೀಯ ಶಾಸಕ ಲಂಚ ಪಡೆದು ವರ್ಗಾವಣೆ ಮಾಡಿದ್ದಾರೆ. ಅವರಲ್ಲಿ ತಪ್ಪಿತಸ್ಥರು ರಾಜೀನಾಮೆ ನೀಡಬೇಕು.
ಸಿಎಂಗೆ ಗೊತ್ತಿಲ್ಲವೆ? ಪತ್ರಕರ್ತರಿಗೆ ಉಡುಗೊರೆ : ಪಿಎಸ್‌ಐ ನೇಮಕಾತಿ ಹಗರಣದಿಂದ ಅನ್ಯಾಯಕ್ಕೀಡಾದ ವಿದ್ಯಾರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರನ್ನು ತಳ್ಳಿ ಹೊರಹಾಕಲಾಗಿದೆ. ಈ ಬಿಜೆಪಿಯವರಿಗೆ ಮಾನವೀಯತೆ ಇಲ್ಲ. ಹಿಟ್ಲರ್ ವಂಶಸ್ಥರಾದ ಬಿಜೆಪಿಯವರಲ್ಲಿ ಮಾನವೀಯತೆ ಇರುತ್ತಾ? ಸರ್ವಾಧಿಕಾರದಲ್ಲಿ ನಂಬಿಕೆ ಇರುವುದರಿಂದಲೇ ಇವರು ಹಿಟ್ಲರ್ ನನ್ನು ಹೊಗಳುತ್ತಾರೆ.
ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಬಾರದೇ ಅವರ ಕಚೇರಿಯ ಸಿಬ್ಬಂದಿ ಪತ್ರಕರ್ತರಿಗೆ ಉಡುಗೊರೆ ರೂಪದಲ್ಲಿ ಲಕ್ಷ ಲಕ್ಷ ಹಣ ಕೊಡಲು ಸಾಧ್ಯವೇ? ನಳಿನ್ ಕುಮಾರ್ ಕಟೀಲ್ ಒಬ್ಬ ಜೋ ಕರ್ ಇದ್ದಂತೆ ಎಂದು ಆಪಾದಿಸಿದರು.
ಇದನ್ನೂ ಓದಿ:ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ.. ಮುಳಬಾಗಿಲಿನಲ್ಲಿ ಸಮಾವೇಶ