ಬೆಂಗಳೂರು: ಕಳೆದ ತಿಂಗಳು ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕಾವಲ ಭೈರಸಂದ್ರದಲ್ಲಿ ನಡೆದ ಗಲಭೆ ಪೀಡಿತ ಪ್ರದೇಶಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಪಡೆದಿದ್ದಾರೆ. ಒಟ್ಟು 26 ದಿನಗಳ ನಂತರ ಇದೀಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಗಲಭೆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣದಿಂದ ಗಲಭೆ ಪ್ರದೇಶ ಕಾವಲಭೈರಸಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಎರಡು ದಿನಗಳ ಹಿಂದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೂಡ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಸಮಾಲೋಚಿಸಿ ತೆರಳಿದ್ದರು.
ಶೀಘ್ರವೇ ಅಲ್ಲಿಗೆ ಭೇಟಿ ನೀಡುವುದಾಗಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಈ ಹಿನ್ನೆಲೆ ನಾಳೆ (ಸೆ.2) ಕಾವಲ್ ಬೈರಸಂದ್ರ ಕ್ಕೆ ಸಿದ್ದರಾಮಯ್ಯ ಭೇಟಿ ನೀಡಲು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಭೇಟಿ ನೀಡಲಿದ್ದು, ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಭೇಟಿ ವೇಳೆ ಘಟನೆ ಬಗ್ಗೆ ಪೊಲೀಸರಿಂದ ಹಾಗೂ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ್ ನಿವಾಸಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ, ಕುಟುಂಬ ಸದಸ್ಯರ ಜೊತೆ ಮಾತನಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ರಾಜ್ಯ ನಾಯಕರು ಕೂಡ ಇದೇ ಸಂದರ್ಭ ಸಾಥ್ ನೀಡಲಿದ್ದಾರೆ.