ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆಗೆ ಪ್ರತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ 'ಆಪರೇಷನ್ ಜೆಡಿಎಸ್' ಮಾಡಬಹುದೆನ್ನುವ ಭೀತಿ ಕಮಲ ಪಾಳಯವನ್ನು ಕಾಡುತ್ತಿದೆ. ಹೀಗಾಗಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ಗೆ ತೆರಳಲು ಬಿಜೆಪಿ ತೀರ್ಮಾನಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಈ ನಡೆಗೆ ಮುಂದಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರ್ಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಶಾಕ್ ನೀಡಿದಂತಾಗಿದೆ.
ಅನಿರೀಕ್ಷಿತವಾಗಿ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಮುಖ್ಯಮಂತ್ರಿಗಳ ಘೋಷಣೆ ಬಿಜೆಪಿಯವರನ್ನು ಬೆಚ್ಚಿಬೀಳಿಸಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಶಾಸಕರನ್ನು ಸೆಳೆಯಬಹುದೇ ಎನ್ನುವ ಆತಂಕ ಕಮಲ ಪಾಳೆಯಕ್ಕೆ ಕಾಡತೊಡಗಿದ್ದು, ಅದಕ್ಕಾಗಿ ತನ್ನ ಎಲ್ಲ ಶಾಸಕರನ್ನು ರೆಸಾರ್ಟ್ನಲ್ಲಿ ಹಿಡಿದಿಟ್ಟುಕೊಳ್ಳಲು ತೀರ್ಮಾನಿಸಿದೆ.
ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ.