ಬೆಂಗಳೂರು: ಸೈಬರ್ ಕ್ರೈಂ ಈಗ ಎಲ್ಲೆಡೆ ಸಾಮಾನ್ಯದಂತಾಗಿಬಿಟ್ಟಿದೆ. ದೈಹಿಕವಾಗಿ ಯಾವುದೇ ಕೃತ್ಯ ನಡೆಸದೆ ಕುಳಿತಲ್ಲೇ ಮೈಂಡ್ ಗೇಮ್ ಆಡಿ ಹಣಗಳಿಸುವ ಕ್ರಿಮಿನಲ್ಗಳೇ ಹೆಚ್ಚಾಗುತ್ತಿದ್ದಾರೆ. ಇದೀಗ ಓಎಲ್ಎಕ್ಸ್ ಎಂಬುದು ವಂಚಕರಿಗೆ ವರದಾನವಾಗಿದೆ. ಆನ್‌ಲೈನ್ ವ್ಯವಹಾರ ನಡೆಸುವ ಓಎಲ್ಎಕ್ಸ್ನ ತಮ್ಮ ವಂಚನೆಗೆ ಬಳಸಿ ಲಕ್ಷಾಂತರ ರೂ. ಪಂಗನಾಮ ಹಾಕ್ತಿದ್ದ ಆರೋಪಿಗಳನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕರಣ್ ಸಿಂಗ್, ಮೆಹಜರ್, ಜಮೀಲ್, ಆರಿಸ್ ಮತ್ತು ಅಕ್ರಮ್ ಬಂಧಿತರು. ಇವರೆಲ್ಲರೂ ಕೂಡ ರಾಜಸ್ಥಾನದ ಭರತ್ ಪೂರ್ ಜಿಲ್ಲೆಯವರಾಗಿದ್ದಾರೆ. ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ ದೇಶದಾದ್ಯಂತ ವಂಚನೆ ನಡೆಸಿರುವ ಪ್ರಕರಣಗಳು ಇದೀಗ ಬೆಳಕಿಗೆ ಬಂದಿದೆ. ಮೊದಲಿಗೆ ಕಾರು, ಬೈಕ್, ಮೊಬೈಲ್, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಪರಿಕರಗಳನ್ನ ಮಾರಾಟ ಮಾಡುವುದಾಗಿ ನಂಬಿಸಿ ಜಾಹೀರಾತು ನೀಡಿ ನಂತರ ಗ್ರಾಹಕರ ಜೊತೆ ಚಾಟ್ ಮಾಡ್ತಿದ್ದರು. ಕಡಿಮೆ ಬೆಲೆಗೆ ವಸ್ತುಗಳು ದೊರಕುವ ರೀತಿ ನಂಬಿಸಿ ಅವರಿಂದ ಅಡ್ವಾನ್ಸ್ ಎಂದು ಗೂಗಲ್ ಪೇ ಮತ್ತು ಫೊನ್ ಪೇ ಮೂಲಕ ಕ್ಯೂಆರ್ ನಂಬರ್ ಪಡೆದು ಪಂಗನಾಮ ಹಾಕುತ್ತಿದ್ದರು.
ಗ್ರಾಹಕರು ಆನ್‌ಲೈನ್ ಪೇಮೆಂಟ್ ಮಾಡಿದ ನಂತರ ಹಣ ವರ್ಗಾವಣೆಯಾಗಿದ್ದರೂ ನೆಟ್ವರ್ಕ್ ಪ್ರಾಬ್ಲಂ ಇದೆ , ಣ ಬಂದಿಲ್ಲ ನಂತರ ಹಣ ರೀ ಫಂಡ್ ಆಗುತ್ತೆ ಎಂದು ಸುಳ್ಳು ಹೇಳಿ ಮತ್ತೆ ಮತ್ತೆ ಮೋಸ ಮಾಡುತ್ತಿದ್ದರು. ಈ ಆರೋಪಿಗಳು ಹೆಚ್ಚಾಗಿ ಭಾರತೀಯ ಯೋಧರ ಹೆಸರಿನಲ್ಲಿಯೇ ಹೆಚ್ಚು ವಂಚಿಸಿರೋದು ಬೆಳಕಿಗೆ ಬಂದಿದೆ. ಇವರೆಲ್ಲರೂ ಓಎಲ್ಎಕ್ಸ್, ಗೂಗಲ್ ಪೇನಲ್ಲಿ ಕೆಲಸ ಮಾಡಿಕೊಂಡಿದ್ದ ಮಾಜಿ ನೌಕರರಾಗಿದ್ದಾರೆ.
ಆನ್‌ಲೈನ್ ವಂಚನೆ ಪ್ರಕರಣದಲ್ಲೇ ಈ ಹಿಂದೆ ಕರಣ್ ಸಿಂಗ್ ಎಂಬಾತನನ್ನ ನಗರ ಪೊಲೀಸರು ಬಂಧಿಸಿದ್ದರು. ಇದೇ ದ್ವೇಷದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಆತ ಟ್ರೆಡ್ಮಿಲ್ ಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನಲ್ಲಿ ಜಾಹೀರಾತು ಹಾಕಿ ವಂಚನೆ ಮಾಡಿದ್ರು.
ದುರಂತ ಅಂದ್ರೆ ಕಳೆದ ಬಾರಿ ದಾಖಲಾದ 316 ಕೇಸ್ಗಳಲ್ಲಿ 200 ಪ್ರಕರಣದಲ್ಲಿ ಇವರ ಕೈವಾಡವಿದೆ. ಸದ್ಯ ಆರೋಪಿಗಳನ್ನ ಹೆಡೆಮುರಿ ಕಟ್ಟಿರುವ ನಗರ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆ ಈ ಆರೋಪಿಗಳನ್ನ ಹಿಡಿಯಲು ಹೋದ ಬೆಂಗಳೂರು ಪೊಲೀಸರ ಮೇಲೂ ಅಟ್ಯಾಕ್ ಮಾಡಲು ಕೂಡ ಬಂದಿದ್ದಾರೆ. ಸದ್ಯ ಬಹಳ ರಿಸ್ಕ್ ತೆಗೆದುಕೊಂಡು ಆರೋಪಿಗಳನ್ನ ಬಂಧಿಸಿದ ಕಾರಣ ನಗರ ಆಯುಕ್ತ ಸೈಬರ್ ತಂಡಕ್ಕೆ ₹5 ಲಕ್ಷ ಬಹುಮಾನ ಘೋಷಿಸಿದ್ದಾರೆ.