ಬೆಂಗಳೂರು: ಶಿಕ್ಷಣ ಸಚಿವರ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟದವರು ಇದೀಗ ತಿರುಗಿ ಬಿದ್ದಿದ್ದಾರೆ.
ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನ ಫೇಲ್ ಮಾಡಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿರುವ ಸೂಚನೆಯನ್ನು ಇದೀಗ ಕ್ಯಾಮ್ಸ್ ಖಂಡಿಸಿವೆ. ಇತ್ತ ಶೇ. 50-60 ರಷ್ಟು ಮಕ್ಕಳ ಪೋಷಕರು ದಾಖಲಾತಿ ಮಾಡಿಕೊಂಡಿಲ್ಲ. ಜೊತೆಗೆ ಶುಲ್ಕವನ್ನೂ ಕಟ್ಟಿಲ್ಲ. ಹಿಂದಿನ ವರ್ಷದ ಬಾಕಿ ಶುಲ್ಕ ಸಹ ಮಕ್ಕಳ ಪೋಷಕರು ಪಾವತಿಸಿಲ್ಲ. ಇವರಿಗೆಲ್ಲ ಜೂನ್ನಿಂದಲ್ಲೂ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಆದರೆ, ಶಿಕ್ಷಣ ಸಚಿವರ ದ್ವಂದ್ವ ಹೇಳಿಕೆಗಳು ಮತ್ತಷ್ಟು ಇಕ್ಕಟ್ಟಿಗೆ ದೂಡುತ್ತಿವೆ ಅಂತ ಕ್ಯಾಮ್ಸ್ ಆರೋಪಿಸಿದೆ.
ಶುಲ್ಕ ಕಟ್ಟಿಲ್ಲ ಅಂದರೂ ಪಾಸ್ ಮಾಡುತ್ತೇವೆ ಎಂಬ ಹೇಳಿಕೆ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಓದುವುದರ ಬಗ್ಗೆ ಅಸಡ್ಡೆ ಉಂಟು ಮಾಡಿದೆ. ಶುಲ್ಕ ಯಾಕೆ ಕಟ್ಟಬೇಕು, ಹೇಗೆ ಇದ್ದರೂ ಪಾಸ್ ಆಗುತ್ತಿವಲ್ಲ ಅನ್ನೋ ಮನೋಭಾವ ಈಗ ಎಲ್ಲರಲ್ಲಿ ಬರ್ತಿದೆ ಅಂತ ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಸಂಬಳ, ಖರ್ಚು-ವೆಚ್ಚದ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಹೀಗಾಗಿ, ಯಾರು ಬಾಕಿ ಶುಲ್ಕ ಹಾಗೂ ಈ ವರ್ಷದ ಶುಲ್ಕ ಕಟ್ಟಿಲ್ವೋ ಅವರಿಗೆ ಇದೇ ನವೆಂಬರ್ 30 ರಿಂದ ಆನ್ಲೈನ್ ಕ್ಲಾಸ್ ಅನ್ನು ಸ್ಥಗಿತ ಮಾಡಲಾಗುವುದು ಎಂದು ಕ್ಯಾಮ್ಸ್ ಎಚ್ಚರಿಕೆ ನೀಡಿದೆ.
ಶಿಕ್ಷಕರು ಹಗಲಿರುಳು ಮೊಬೈಲ್ ಹಿಡಿದು ಆನ್ಲೈನ್ ಕ್ಲಾಸ್ಗಾಗಿ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತದೃಷ್ಟಿಯಿಂದ ಈ ಕಠಿಣ ನಿಲುವು ಅಗತ್ಯ ಅಂತ ಶಶಿಕುಮಾರ್ ತಿಳಿಸಿದ್ದಾರೆ.
ಸದ್ಯ, ಖಾಸಗಿ ಶಿಕ್ಷಣ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿರುವ ಸರ್ಕಾರ ಯಾವ ರೀತಿ ಇದಕ್ಕೆ ಪರಿಹಾರ ಒದಗಿಸುತ್ತೆ ಕಾದು ನೋಡಬೇಕು.