ಬೆಂಗಳೂರು: ಆನ್ಲೈನ್ ಮೂಲಕ ಹಳೆಯ ಮೊಬೈಲ್ಗಳನ್ನು ಕೊಳ್ಳುತ್ತಿದ್ದ ಕಂಪೆನಿಗೆ ವಂಚನೆ ಎಸಗಿದ ಆರೋಪದಡಿ ಕಂಪೆನಿಯ ಮಾಜಿ ಉದ್ಯೋಗಿ ಸೇರಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕ್ಯಾಶಿಫೈ ಕಂಪನಿಯ ಮಾಜಿ ಉದ್ಯೋಗಿ ಸೋನು ಶರ್ಮಾ ಹಾಗೂ ಸಮೀರ್ ಅಹಮ್ಮದ್ ಬಂಧಿತ ಆರೋಪಿಗಳು.
ಸೋನು ಶರ್ಮಾ ಹಲವು ತಿಂಗಳಿಂದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಏಪ್ರಿಲ್‌ನಲ್ಲಿ ಕೆಲಸ ಬಿಟ್ಟಿದ್ದ. ಆದರೆ ಕೆಲಸ ತೊರೆಯುವ ಮುನ್ನ ಸಹೋದ್ಯೋಗಿ ರಾಕೇಶ್ ಎಂಬುವರಿಗೆ ತಿಳಿಯದಂತೆ ಆತನ ಮೊಬೈಲಿನಲ್ಲಿ ಮೊಬೈಲ್ ಟ್ರ್ಯಾಕರ್ ಇನ್‌ಸ್ಟಾಲ್ ಮಾಡಿಕೊಂಡಿದ್ದ. ಟ್ರ್ಯಾಕರ್ ಮೂಲಕವೇ ಸಹೋದ್ಯೋಗಿಯ ಯೂಸರ್ ಐಡಿ, ಪಾಸ್‌ವರ್ಡ್ ಪಡೆದು, ತನ್ನ ಸಹಚರ ಸಮೀರ್ ಅಹಮ್ಮದ್ನನ್ನೇ ಗ್ರಾಹಕನಂತೆ ಬಿಂಬಿಸಿ ಆರೋಪಿ ಸೋನು ಶರ್ಮಾ ವ್ಯವಹಾರ ನಡೆಸಿದ್ದಾನೆ.
ಕ್ಯಾಶಿಫೈ ಆನ್ಲೈನ್ ಕಂಪನಿಯೇ ಐಫೋನ್ - 6 ಖರೀದಿಸಿರುವ ರೀತಿಯಲ್ಲಿ ವ್ಯವಹರಿಸಿದ್ದ. ಬಳಿಕ ಕಂಪೆನಿಯ 63,800 ರೂ.ಹಣವನ್ನ ಸ್ನೇಹಿತನ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಈ ಸಂಬಂಧ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು,ದೂರಿನನ್ವಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕ್ಯಾಶಿಫೈ ಆ್ಯಪ್ ಅಂದರೆ ಏನು ?
ಖಾಸಗಿ ಕಂಪೆನಿಯಾದ ಕ್ಯಾಶಿಫೈ ಆ್ಯಪ್ ಮೂಲಕ ಮೊಬೈಲ್ ಕೊಂಡುಕೊಳ್ಳುವ ಸಂಸ್ಥೆಯಾಗಿದೆ. ಗ್ರಾಹಕರಿಂದ ಮೊಬೈಲ್ ಖರೀದಿಸಿ ಹಾಳಾಗಿರುವ ಮೊಬೈಲ್ ಸರಿಪಡಿಸಿ ಜೊತೆಗೆ ಮೊಬೈಲ್‌ಗೆ ಹೊಸ ಅಗತ್ಯ ಉಪಕರಣ ಅಳವಡಿಸಿ ನಿರ್ದಿಷ್ಟ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.