ಬೆಂಗಳೂರು: ಸಹಕಾರ ಸಂಘದ ಕಾಯ್ದೆಯಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು. ಜೆಡಿಎಸ್‌ನ ಮರಿತಿಬ್ಬೇಗೌಡ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸಾರ್ವಜನಿಕ ಸಂಪರ್ಕಕ್ಕೆ ಅನುಕೂಲಕರವಾಗಿರುವ ಕಾರಣ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಸಾಧ್ಯವಿಲ್ಲ ಎಂದರು. ಮರೆತಿಬ್ಬೇಗೌಡರ ಪ್ರಶ್ನೆಗೆ ಬಿಜೆಪಿ ಸದಸ್ಯ ವೈ.ಎ.ನಾರಾಯಣಗೌಡ, ಜೆಡಿಎಸ್ ಮತ್ತೊಬ್ಬ ಸದಸ್ಯ ಎಸ್.ಎಲ್.ಭೋಜೇಗೌಡ ಧ್ವನಿಗೂಡಿಸಿದರು. ಇದಕ್ಕೆ ಸಚಿವ ಮಹದೇವಪ್ಪ ಉತ್ತರಿಸಿ, ವಸತಿ ಶಾಲೆಗಳಲ್ಲಿ ಪಿಯು ವಿಜ್ಞಾನ, ವಾಣಿಜ್ಯ ತರಗತಿ ಶೀಘ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು. ಅಲ್ಲದೇ, ಜಿಲ್ಲೆಗೊಂದು ಪದವಿ ವಸತಿ ಕಾಲೇಜು ಹಾಗೂ ಸಿಬಿಎಸ್‌ಇ ಶಾಲೆ ತೆರೆಯುವ ಚಿಂತನೆ ಇದೆ ಎಂದು ತಿಳಿಸಿದರು.
ವಸತಿ ಶಾಲೆಗಳ ಶಿಕ್ಷಕರು, ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲು ಸದನ ಮುಗಿಯುವುದರೊಳಗೆ ವಿಧಾನ ಪರಿಷತ್ ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಭೆ ಕರೆಯುವುದಾಗಿ ಸಚಿವರು ಭರವಸೆ ನೀಡಿದರು. ಎಲ್ಲ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ವಸತಿ ಶಾಲೆಗಳ ಶಿಕ್ಷಕರಿಗೆ ಡಿಸಿಆರ್‌ಜಿ ಕುಟುಂಬ ಪಿಂಚಣಿ ಯೋಜನೆ ವಿಸ್ತರಣೆ ಸಾಧ್ಯವಿಲ್ಲವೆಂದು ತಿಳಿಸಿದ್ದರೂ, ಮತ್ತೊಮ್ಮೆ ಪರಿಶೀಲಿಸಲು ಸಲ್ಲಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಪರಿಶೀಲಿಸುತ್ತಿದೆ. ಕೆಜಿಐಡಿ ಸೌಲಭ್ಯವನ್ನು ವಿಸ್ತರಣೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಸ್ಪಷ್ಟ ಹಿಂಬರಹದೊಂದಿಗೆ ತಿರಸ್ಕರಿಸಿದೆ ಎಂದರು. ಜ್ಯೋತಿ ಸಂಜೀವಿನಿ ಅಥವಾ ಆರೋಗ್ಯ ಸಿರಿ ಅನ್ವಯಿಸುವುದಕ್ಕೆ ತಾಂತ್ರಿಕ ಸಮಸ್ಯೆ ಇದೆ. ಈ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರಿಗೆ ಅನ್ವಯಿಸಿದ ನಂತರ ಅನುದಾನ ಲಭ್ಯತೆ ಖಚಿತಪಡಿಸಿಕೊಂಡು ಪ್ರಸ್ತಾವನೆ ಸಲ್ಲಿಸಲು ಆರ್ಥಿಕ ಇಲಾಖೆ ತಿಳಿಸಿದೆ ಎಂದು ಹೇಳಿದರು.
ಶಾಲೆಗಳ ಉನ್ನತೀಕರಣ: ರಾಜ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು 113 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು 11 ಮತ್ತು 12ನೇ ತರಗತಿಗಳಿಗೆ ಉನ್ನತೀಕರಿಸುವ ಪ್ರಸ್ತಾವನೆ ಸದ್ಯಕ್ಕೆ ಮುಂದೂಡಲು ಆರ್ಥಿಕ ಇಲಾಖೆ ಸೂಚಿಸಿದೆ. 2023-24ನೇ ಸಾಲಿನಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಸತಿ ಶಾಲೆಗಳನ್ನು 11 ಮತ್ತು 12ನೇ ತರಗತಿವರೆಗೆ ಉನ್ನತೀಕರಣ ಕೋರಿದ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಮಹದೇವಪ್ಪ ತಿಳಿಸಿದರು.
ಡಿಸಿಸಿ ಬ್ಯಾಂಕ್ ಅವ್ಯವಹಾರದ ತನಿಖೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆ ನಡೆಸಲಾಗುವುದು ಎಂದು ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು. ಬಿಜೆಪಿಯ ತುಳಸಿಮುನಿರಾಜುಗೌಡ ಗಮನ ಸೆಳೆಯುವ ಸೂಚನೆ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವ್ಯವಹಾರ ನಡೆದಿದೆ ಅಥವಾ ಇಲ್ಲವೆಂದು ಹೇಳಲಾರೆ. ಆದರೆ ತನಿಖೆ ನಡೆಸಿ ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಲು ಬದ್ಧ. ಸಹಕಾರ ಸಂಸ್ಥೆಗಳ ಮೇಲೆ ಸಾರಾಸಗಟಾಗಿ ಆರೋಪ ಹೊರಿಸುವುದರಿಂದ ಜನರಲ್ಲಿ ಅಪನಂಬಿಕೆ ಉಂಟಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಮರು ಲೆಕ್ಕಪರಿಶೋಧನೆಗೆ ಸರ್ಕಾರ ನೇಮಿಸಿದ ತಂಡ ಜೂ.7ರಂದು ತೆರಳಿದಾಗ ಬ್ಯಾಂಕಿನವರು ಯಾವುದೇ ದಾಖಲೆಗಳನ್ನು ಹಾಜರಿಪಡಿಸುವುದಿಲ್ಲವೆಂದು ವರದಿ ಸಲ್ಲಿಸಿದ್ದಾರೆ. ಈ ಮಧ್ಯೆ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮರು ಲೆಕ್ಕಪರಿಶೋಧನೆ ಕೈಬಿಡಲು ಕೋರಿದ್ದಾರೆ. ಅವ್ಯವಹಾರ ನಡೆದಿದೆ ಎಂದು ಸದನದ ಮೂಲಕ ಮತ್ತೊಮ್ಮೆ ಗಮನಸೆಳೆದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬದ್ಧ ಎಂದರು. ಹಾಗೆಯೇ ಮಾರ್ಗಸೂಚಿದರದ ಬಗ್ಗೆಯಲ್ಲ, ಸದಸ್ಯರಿಂದ ಕಟ್ಟಿಸಿಕೊಂಡ ಹಣಕ್ಕಿಂತ ಕಡಿಮೆ ದರಕ್ಕೆ ನೋಂದಣಿ ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ಆದಾಯ ನಷ್ಟ ಮಾಡಲಾಗಿದೆ ಎಂಬ ಆಪಾದನೆ ಬಗ್ಗೆ ತಪಾಸಣೆ ನಡೆಸುವೆ ಎಂದು ಸಚಿವ ಕೆ.ಎನ್.ರಾಜಣ್ಣ ಪುನರುಚ್ಚರಿಸಿದರು.
ಇದಕ್ಕೂ ಮುನ್ನ ತುಳಸಿಮುನಿರಾಜುಗೌಡ ಮಾತನಾಡಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮರುಪಾವತಿಸಿದ ನಂತರ ಸರ್ಕಾರದಿಂದ ಹೆಚ್ಚಿನ ಬಡ್ಡಿ ಮೊತ್ತವನ್ನು ಭರಿಸಿಕೊಂಡಿದೆ. ಕೇವಲ ಮೂರು ತಿಂಗಳ ಲೆಕ್ಕವೇ ಬಹುಕೋಟಿ ರೂ.ಗಳ ಅಕ್ರಮಕ್ಕೆ ಪುರಾವೆಯಾಗಿದೆ ಎಂದು ದೂರಿದರು. ಅಣ್ಣೆಹಳ್ಳಿ ಸಂಘವು 2017-18ರಲ್ಲಿ ವಾಸ್ತವವಾಗಿ 44.75 ಲಕ್ಷ ರೂ. ಬಡ್ಡಿ ಮೊತ್ತ ಕ್ಲೇಮ್ ಮಾಡುವ ಬದಲು 74 ಲಕ್ಷ ರೂ.ಗೂ ಅಧಿಕ ಮೊತ್ತ ಕ್ಲೇಮ್ ಮಾಡಿ ಭರಿಸಿಕೊಂಡಿದೆ ಎಂದು ಹಗರಣಕ್ಕೆ ಉದಾಹರಣೆ ನೀಡಿದರು.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ಸೌಲಭ್ಯ ಇಲ್ಲ, ಗ್ಯಾರಂಟಿಗಳು ಸಿಗಲಿವೆ: ದಿನೇಶ್ ಗುಂಡೂರಾವ್