ದೊಡ್ಡಬಳ್ಳಾಪುರ : ಒಂದು ಎಕರೆ ಜಮೀನಿಗಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿ ಅದು ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಚನ್ನಾಪುರ ಗ್ರಾಮದ ಲಕ್ಷ್ಮಮ್ಮ (55) ನಾರಾಯಣಪ್ಪ (65) ಎಂಬುವರು ಮೃತ ದಂಪತಿ. ಹುಟ್ಟು ಸೋಮಾರಿಯಾಗಿದ್ದ ನಾರಾಯಣಪ್ಪ ಪರಸ್ತ್ರೀಯ ಮೋಹದ ಬಲೆಯಲ್ಲಿ ಬಿದ್ದಿದ್ದನಂತೆ. ದುಶ್ಚಟಗಳ ದಾಸನಾಗಿದ್ದ ಈತ ಹೆಂಡತಿ ಮಕ್ಕಳಿಗೆ ತಿಳಿಸದೆ ಒಂದು ಎಕರೆ ಜಮೀನು ಮಾರಾಟ ಮಾಡಿದ್ದ. ಮಾರಾಟದಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದನಂತೆ. ವಿಷಯ ತಿಳಿದ ಹೆಂಡತಿ, ಮಕ್ಕಳು ನಾರಾಯಣಪ್ಪನನ್ನು ಮನೆಯಿಂದ ಹೊರ ಹಾಕಿದ್ರು.
ಒಂದು ವರ್ಷದಿಂದ ತನ್ನ ತಮ್ಮನ ಮನೆಯಲ್ಲಿ ವಾಸವಾಗಿದ್ದ ನಾರಾಯಣಪ್ಪ, ನಿನ್ನೆ ರಾತ್ರಿ ತನ್ನ ಮನೆಗೆ ಬಂದು ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ನಂತರ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಅಸ್ವಸ್ಥಗೊಂಡಿದ್ದ ನಾರಾಯಣಪ್ಪನನ್ನ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.