ಬೆಂಗಳೂರು: ವಿಧಾನಸಭೆ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮೀಸಲು ಹೋರಾಟ ಹೆಚ್ಚಾಗುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯದವರು ರಾಜ್ಯದ ಹಲವೆಡೆ ತೀವ್ರವಾದ ಹೋರಾಟ ನಡೆಸುತ್ತಿರುವ ಬೆಳವಣಿಗೆಯ ನಡುವೆ, ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಜನಾಂಗದವರೂ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಹಮ್ಮಿಕೊಂಡು ಬಿಜೆಪಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧವಾಗುತ್ತಿದ್ದಾರೆ.
ರಾಜ್ಯ ಒಕ್ಕಲಿಗರ ಪೂರ್ವಭಾವಿ ಸಭೆ : ಮೀಸಲಾತಿ ಹೆಚ್ಚಳ ಹೋರಾಟದ ರೂಪುರೇಷೆ ನಿಗದಿಗೊಳಿಸಲು ನಾಳೆ ಭಾನುವಾರ ರಾಜ್ಯ ಒಕ್ಕಲಿಗರ ಸಂಘವು ಕುವೆಂಪು ಕಲಾಕ್ಷೇತ್ರದಲ್ಲಿ ಸಮುದಾಯದ ಸ್ವಾಮೀಜಿಗಳ , ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿನ ಒಕ್ಕಲಿಗ ನಾಯಕರ, ಸಚಿವರ, ಶಾಸಕರ, ಮಾಜಿ ಮುಖ್ಯಮಂತ್ರಿಗಳ ಸಭೆ ಕರೆದಿದೆ.
ಈ ಸಭೆಯಲ್ಲಿ ಭಾಗವಹಿಸುವಂತೆ ಆದಿಚುಂಚನಗಿರಿ ಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ, ಡಿ ವಿ ಸದಾನಂದಗೌಡ, ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅದ್ಯಕ್ಷ ಡಿ ಕೆ. ಶಿವಕುಮಾರ್ ಬಿಜೆಪಿ ಸರಕಾರದಲ್ಲಿನ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಚಿವರುಗಳಾದ ಆರ್ ಅಶೋಕ, ಡಾ. ಅಶ್ವತ್ಥನಾರಾಯಣ್, ಎಸ್ ಟಿ ಸೋಮಶೇಖರ್, ಡಾ. ಸುಧಾಕರ್, ನಾರಾಯಣ ಗೌಡ, ಗೋಪಾಲಯ್ಯ ಸೇರಿದಂತೆ ಹಲವು ರಾಜಕೀಯ ಗಣ್ಯರುಗಳಿಗೆ ಹೋರಾಟದ ಪೂರ್ವಭಾವಿ ಸಭೆಗೆ ಆಹ್ವಾನ ನೀಡಲಾಗಿದೆ.
ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯ ಬೇಡಿಕೆ : ಒಕ್ಕಲಿಗ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ. 4 ರಿಂದ 12ಕ್ಕೆ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡು ಬೃಹತ್ ಪ್ರಮಾಣದ ಹೋರಾಟ ನಡೆಸಲು ರಾಜ್ಯ ಒಕ್ಕಲಿಗ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಮುಂದಾಳತ್ವ ವಹಿಸಿ ಪ್ರತಿಭಟನೆಗೆ ವೇದಿಕೆ ಸಿದ್ಧಪಡಿಸುತ್ತಿದೆ.
ವಿವಿಧ ಸಮುದಾಯದಿಂದ ಮೀಸಲಾತಿಗೆ ಹೋರಾಟ : ಆಡಳಿತಾರೂಢ ಬಿಜೆಪಿ ಸರಕಾರವು ಎಸ್ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿನ ಹಲವಾರು ಸಮುದಾಯಗಳಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎನ್ನುವ ಕೂಗು ಪ್ರತಿಧ್ವನಿಸತೊಡಗಿದೆ. ಕುರುಬ ಸಮುದಾಯದವರು ತಮಗೆ ಎಸ್ಟಿ ಮೀಸಲು ನೀಡಬೇಕೆಂದು, ಬೇಡ ಜಂಗಮ ಜಾತಿಯವರು ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸಿ ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ.
ಪಂಚಮಸಾಲಿ ಮೀಸಲಾತಿ ಘೋಷಣೆಗೆ ಗಡುವು : ಪಂಚಮಸಾಲಿ ಲಿಂಗಾಯತ ಸಮುದಾಯದವರು 2ಎ ಮೀಸಲು ಜಾರಿ ಮಾಡುವಂತೆ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದು ಈ ಸಂಬಂಧ ಡಿಸೆಂಬರ್ 19 ರೊಳಗೆ ಅಂತಿಮ ನಿರ್ಧಾರ ತಗೆದುಕೊಳ್ಳುವಂತೆ ತಿಳಿಸಿದೆ. ಮೀಸಲಾತಿ ನೀಡದಿದ್ದಲ್ಲಿ ಹೋರಾಟ ನಡೆಸುವ ಸಂದೇಶವನ್ನು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಮತ್ತು ಮೀಸಲಾತಿ ಹೋರಾಟಗಾರರು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ರವಾನಿಸಿದ್ದಾರೆ.
ಬೆಳಗಾವಿಯ ಅಧಿವೇಶನದಲ್ಲಿ ಮೀಸಲಾತಿ ಕೂಗು : ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಡಿಸೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದಲ್ಲಿ ಮೀಸಲಾತಿ ಹೋರಾಟದ ಕೂಗು ಪ್ರತಿಧ್ವನಿಸಲಿದೆ. ಒಕ್ಕಲಿಗರು, ಕುರುಬರು, ಬೇಡ ಜಂಗಮ, ಪಂಚಮಸಾಲಿ ಲಿಂಗಾಯತರ ಮೀಸಲಾತಿ ಬೇಡಿಕೆ ಕುರಿತು ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಸಲು ಪ್ರತಿಪಕ್ಷಗಳ ಮುಖಂಡರು ಸಜ್ಜಾಗಿದ್ದಾರೆ.
ರಾಜ್ಯದಲ್ಲಿ ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದ ( ಇಡಬ್ಲ್ಯುಎಸ್ )ಜನರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತರಬೇಕು ಎನ್ನುವುದರ ವಿಷಯವಾಗಿಯೂ ಕೂಗುಗಳು ಕೇಳಿಬರುತ್ತಿವೆ. ಒಕ್ಕಲಿಗ ಜನಾಂಗಕ್ಕೆ ಇಡಬ್ಲ್ಯು ಎಸ್ ಮೀಸಲು ಕೋಟಾವನ್ನು ನೀಡುವಂತೆಯೂ ಒತ್ತಾಯಿಸುತ್ತಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ರಾಜ್ಯ ಸರಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10 ರಷ್ಟು ಮೀಸಲಾತಿಯನ್ನು ಇದುವರೆಗೆ ಜಾರಿಗೆ ತಂದಿಲ್ಲ. ಕೇಂದ್ರ ಸರಕಾರವು 2019 ರ ಫೆಬ್ರವರಿಯಲ್ಲಿಯೇ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದಿದೆ.
ಇದನ್ನೂ ಓದಿ : ವಿಧಾನಸೌಧ ಮುತ್ತಿಗೆ ಕೈಬಿಟ್ಟು ಮತ್ತೊಂದು ಗಡುವು ನೀಡಿದ ಕೂಡಲಸಂಗಮ ಶ್ರೀ