ಬೆಂಗಳೂರು: ತೆರಿಗೆ ವಂಚನೆ ಆರೋಪ ಹಿನ್ನೆಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಟರ್ಫ್ ಕ್ಲಬ್ ಸೇರಿದಂತೆ 20ಕ್ಕೂ ಹೆಚ್ಚು ಟರ್ಫ್ ಬುಕ್ಕಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದ ಹೃದಯ ಭಾಗದಲ್ಲಿ ಇರುವ ಬೆಂಗಳೂರಿನ ಟರ್ಫ್ ಕ್ಲಬ್ನಲ್ಲಿ ಭಾರೀ ಅವ್ಯವಹಾರಗಳು ನಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ತೆರಿಗೆ ವಂಚನೆ ಆರೋಪ ಹಿನ್ನೆಲೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದ್ದು, ಬುಕ್ಕಿಗಳ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. 20 ತಂಡಗಳಾಗಿ ದಾಳಿ ಮಾಡಿರುವ ಅಧಿಕಾರಿಗಳು, 20 ಬುಕ್ಕಿಗಳ ಸ್ಟಾಲ್ಗಳನ್ನು ರೇಡ್ ಮಾಡಿ ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಟರ್ಫ್ ಕ್ಲಬ್ ಮೇಲೆ ಸಿಸಿಬಿಯಿಂದಲೂ ದಾಳಿ ನಡೆದಿತ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ತೆರಿಗೆ ಅಪರ ಆಯುಕ್ತ ನಿತೀಶ್ ಪಾಟೀಲ್, ಬೆಂಗಳೂರು ಟರ್ಫ್ ಕ್ಲಬ್ ಬುಕ್ಕಿಗಳ ಕಚೇರಿ, ಮನೆ ಸೇರಿದಂತೆ 20 ಕಡೆ ದಾಳಿ ಮಾಡಿದ್ದೇವೆ. ಕೋಟ್ಯಂತರ ಹಣ ತೆರಿಗೆ ವಂಚನೆ ಮಾಹಿತಿ ಬಂದಿತ್ತು . ಸದ್ಯ ಟರ್ಫ್ ಕ್ಲಬ್ನಲ್ಲಿ ದಾಳಿ ಮಾಡಿ ಸ್ಟಾಲ್ಗಳನ್ನು ಬಂದ್ ಮಾಡಿಸಲಾಗಿದೆ. ಯಾರೂ ಕೂಡ ಬುಕ್ ಆಫ್ ಅಕೌಂಟ್ಸ್ ಮೈಂಟೇನ್ ಮಾಡಿಲ್ಲ. ಅಕೌಂಟ್ಸ್ ಬುಕ್ಸ್ ನೋಡಿದ್ಮೇಲೆ ತೆರಿಗೆ ವಂಚನೆಯ ಪ್ರಮಾಣ ತಿಳಿಯತ್ತೆ. ಈ ಹಿಂದೆ ಸಮನ್ಸ್ ಕೊಟ್ಟಿದ್ರೂ ಯಾರು ಬಂದಿರಲಿಲ್ಲ. ಹೀಗಾಗಿ ದಾಳಿ ಮಾಡಿದ್ದೇವೆ. ಜಿಎಸ್ಟಿ ಆದ್ಮೆಲೆ ಟರ್ಫ್ ಕ್ಲಬ್ನಲ್ಲಿ ಬಂದಿರೋ ಆದಾಯದ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ರೇಡ್ ಮಾಡಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು, ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ ಎಂದಿದ್ದಾರೆ.