ಬೆಂಗಳೂರು : ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಪರಿಣಾಮವಾಗಿ ಕೊಲ್ಕತ್ತಾದಿಂದ ಮರಳಿ ರಾಜ್ಯಕ್ಕೆ ಆಗಮಿಸಲು ಪರಿತಪಿಸುತ್ತಿದ್ದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವಾಗಿ ತಂಡವು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ಸಾಗಲು ಸಹಕರಿಸಿದ್ದಾರೆ.
ಕೋಲ್ಕತಾದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡ ತೆರಳಿತ್ತು. ನಿನ್ನೆ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಪರಿಣಾಮ ವಾಲಿಬಾಲ್ ತಂಡವು ಅಲ್ಲಿಯೇ ಸಿಲುಕಿತ್ತು. ಈ ಬಗ್ಗೆ ತರಬೇತುದಾರರು ಸೇರಿ 32 ಸದಸ್ಯರನ್ನೊಳಗೊಂಡ ತಂಡವು ತಮ್ಮ ಸಂಕಷ್ಟ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಸಂತೋಷ್ ಲಾಡ್ ಮತ್ತು ಅಧಿಕಾರಿಗಳ ತಂಡ ಎಲ್ಲರಿಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಹಾಗೂ ಸೂಕ್ತ ವಸತಿ, ಊಟದ ವ್ಯವಸ್ಥೆ ಒದಗಿಸಿದ್ದಾರೆ.
ತಮ್ಮ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಲಾಡ್ ಹಾಗೂ ಅಧಿಕಾರಿಗಳಿಗೆ ಕ್ರೀಡಾ ಪಟುಗಳು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ತಂಡ ಕೈಗೊಂಡ ರಕ್ಷಣಾ ಮತ್ತು ನೆರವಿನ ಕಾರ್ಯಗಳ ಕುರಿತು ಸಚಿವ ಸಂತೋಷ್ ಲಾಡ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ.
ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚನೆ : ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಅಗತ್ಯ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಒಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾತ ದುರಂತದ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ, ಕೋಲ್ಕತ್ತಾ ಮುಂತಾದ ರಾಜ್ಯಗಳಿಗೆ ತೆರಳಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಇವರೆಲ್ಲರಿಗೂ ಅಗತ್ಯ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್ ಲಾಡ್, ಈಗಾಗಲೇ ಎಚ್ಎಎಲ್ ವಿಮಾನ ನಿಲ್ದಾಣದಿಂದ ಭುವನೇಶ್ವರಕ್ಕೆ ಹೊರಟಿದ್ದೇವೆ. ಅಲ್ಲಿಂದ ಅಪಘಾತದ ಸ್ಥಳವು 200 ಕಿ.ಮೀ ದೂರ ಇದೆ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಕಾಯ್ದಿರಿಸಿದ ಬೋಗಿಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಸಾಮಾನ್ಯ ಬೋಗಿಗಳು ಹಳಿ ತಪ್ಪಿವೆ. ಏನೇ ಸವಾಲು ಬಂದರೂ ಎದುರಿಸಿ ಕನ್ನಡಿಗರು, ಭಾರತೀಯರ ರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
9845739999 ಇದು ನನ್ನ ವೈಯಕ್ತಿಕ ದೂರವಾಣಿ ಸಂಖ್ಯೆ. ಸಂಕಷ್ಟದಲ್ಲಿರುವವರು, ನೆರವು ಬೇಕಿರುವವರು ನನ್ನನ್ನೇ ನೇರವಾಗಿ ಸಂಪರ್ಕಿಸಬಹುದು. ಏನೇ ಮಾಹಿತಿ ಇದ್ದರೂ ಹಂಚಿಕೊಳ್ಳಿ. ಇದು ರಕ್ಷಣಾ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಹಿಂದೆ ಉತ್ತರಾಖಂಡ, ಕೇದಾರನಾಥ ಭಾಗದಲ್ಲಿ ಮೇಘಸ್ಫೋಟವಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾಗಲೂ ರಕ್ಷಣಾ ನೆರವಿಗೆ ಸಂತೋಷ್ ಲಾಡ್ ಧಾವಿಸಿದ್ದರು.
ಒಡಿಶಾ ರೈಲು ಅಪಘಾತ ಹಿನ್ನೆಲೆ ಬೆಂಗಳೂರಿನಿಂದ ಹಲವು ರೈಲುಗಳು ಸಂಚಾರ ನಡೆಸಿಲ್ಲ, ಹಲವು ರೈಲುಗಳ ಸಂಚಾರ ರದ್ದಾಗಿವೆ. ಕೆಲವು ರೈಲುಗಳ ಮಾರ್ಗಗಳು ಬದಲಾವಣೆ ಆಗಿವೆ. ಅಷ್ಟೇ ಅಲ್ಲದೆ ಮೆಜೆಸ್ಟಿಕ್, ಯಶವಂತಪುರ, ಸರ್.ಎಂ.ವಿ ಟರ್ಮಿನಲ್ ನಿಲ್ದಾಣಗಳಲ್ಲಿನ ಪ್ರಯಾಣಿಕರಿಗೆ ವಿವಿಧೆಡೆ ತೆರಳಲು ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ : ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ