ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಲ್ಲಿ ತಮಗೆ ಆದ ಅನ್ಯಾಯವಾದರೂ ಏನು ಎಂಬ ವಿಷಯದ ಬಹಿರಂಗ ಚರ್ಚೆಗೆ ಆಗಮಿಸುವಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ಮಾಜಿ ಎಂಎಲ್ಸಿ ಪುಟ್ಟಣ್ಣ ಅವರನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಆಹ್ವಾನಿಸಿದ್ದಾರೆ. ಈ ಕುರಿತು ಬಹಿರಂಗ ಪತ್ರ ಬರೆದಿದ್ದು, ಸಚಿವ ಸ್ಥಾನ ಸಿಗದಿರುವುದಕ್ಕೆ ಪಕ್ಷ ತೊರೆದಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
’’2020ರ ಅ.10ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಜಿಲ್ಲೆ ಮತ್ತು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಭಾರತೀಯ ಜನತಾ ಪಾರ್ಟಿಯ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮ ಪರವಾಗಿ ಹಗಲಿರುಳೆನ್ನದೇ ಹತ್ತಾರು ದಿನಗಳ ಕಾಲ ಮಾಡಿದ ನಿಸ್ವಾರ್ಥ ಕಾರ್ಯಗಳಿಂದ ತಾವು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುತ್ತೀರಿ. ಈ ಭಾಗದ ಶಿಕ್ಷಕರು ಭಾರತೀಯ ಜನತಾ ಪಾರ್ಟಿಯ ಮೇಲಿನ ಒಲವಿನಿಂದ ಹಾಗೂ ತಮ್ಮ ಮೇಲಿನ ನಂಬಿಕೆಯಿಂದ ತಮ್ಮ ಪರವಾಗಿ ಮತ ಚಲಾವಣೆ ಮಾಡಿ, ತಮ್ಮನ್ನು ದೊಡ್ಡ ಅಂತರದಿಂದ ಜಯಗಳಿಸುವಂತೆ ಮಾಡಲು ಸಫಲರಾಗಿದ್ದಿರಿ. ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಯಾವ ಸಮಸ್ಯೆಗಳ ಬಗ್ಗೆಯೂ ಚಕಾರ ಎತ್ತದ ತಾವು ಕೇವಲ ಭಾರತೀಯ ಜನತಾ ಪಾರ್ಟಿಯ ಸರ್ಕಾರದಲ್ಲಿ ಸಚಿವರಾಗಬೇಕು ಎಂಬ ಏಕೈಕ ದುರುದ್ದೇಶ ಹೊಂದಿದ್ದಿರಿ. ಸದ್ಯ ಕಾಂಗ್ರೆಸ್ಗೆ ಸೇರಿರುವ ವಿಷಯ ಈಗ ಬಹಿರಂಗವಾಗಿದೆ‘‘ಎಂದು ಎನ್.ಆರ್. ರಮೇಶ್ ಆರೋಪಿಸಿದರು.
ಎಂಎಲ್ಸಿ ಪುಟ್ಟಣ್ಣ ವಿರುದ್ಧ ಅಸಮಾಧಾನ: ’’ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳಲ್ಲಿ ತಮ್ಮನ್ನು ನಿಷ್ಠೆಯಿಂದ ತೊಡಗಿಸಿಕೊಳ್ಳಬೇಕಿದ್ದ ತಾವು, ತಮ್ಮ ಕರ್ತವ್ಯ ಮರೆತು ಕೇವಲ ಅಧಿಕಾರದ ವ್ಯಾಮೋಹದಿಂದ ಭಾರತೀಯ ಜನತಾ ಪಾರ್ಟಿಯನ್ನು ತ್ಯಜಿಸಿದ್ದಿರಿ. ಕಳೆದ 75 ವರ್ಷಗಳ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ 55 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿ ದೇಶವನ್ನು ಮತ್ತು ವಿಶೇಷವಾಗಿ ಕರ್ನಾಟಕ ರಾಜ್ಯವನ್ನು ಲೂಟಿ ಹೊಡೆದಿರುವ ಹಾಗೂ ಸುಮಾರು 150ಕ್ಕೂ ಹೆಚ್ಚು ಬೃಹತ್ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್(ಐ) ಪಕ್ಷವನ್ನು ಸೇರ್ಪಡೆಯಾಗಿದ್ದಿರಿ. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ತಮ್ಮ ಅವಧಿ ಇನ್ನೂ ಮೂರೂವರೆ ವರ್ಷಗಳಿಗೂ ಹೆಚ್ಚು ಕಾಲ ಇದ್ದರೂ , ತಮ್ಮ ಮೇಲೆ ಅಪಾರ ವಿಶ್ವಾಸವನ್ನಿರಿಸಿ ತಮ್ಮ ಪರ ಮತ ಚಲಾವಣೆ ಮಾಡಿದ್ದ ಎಲ್ಲ ಶಿಕ್ಷಕರ ನಂಬಿಕೆಗಳನ್ನು ಹುಸಿಗೊಳಿಸಿದ್ದಿರಿ‘‘ ಎಂದು ಎನ್ ಆರ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಈ ಅತಿಯಾದ ಅಧಿಕಾರದ ವ್ಯಾಮೋಹ ಮತ್ತು ಮಂತ್ರಿಯಾಗಲೇಬೇಕು ಎಂಬ ಏಕೈಕ ಗುರಿಯನ್ನು ಹೊಂದಿರುವ ಸ್ವಾರ್ಥ ರಾಜಕಾರಣಿಯಾದ ತಾವು ಬೆಂಗಳೂರಿನ ಯಾವುದೇ ಕ್ಷೇತ್ರದಿಂದ ಕಾಂಗ್ರೆಸ್(ಐ) ಪಕ್ಷದಿಂದ ಸ್ಪರ್ಧಿಸಿದರೂ ಸಹ ಆ ಕ್ಷೇತ್ರಗಳಲ್ಲಿನ ಮತದಾರರು ಮತ್ತು ಶಿಕ್ಷಕರು ತಮಗೆ ಸರಿಯಾದ ರಾಜಕೀಯ ಪಾಠವನ್ನು ಕಲಿಸುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಹಿರಂಗ ಪತ್ರ ಬರೆದ ರಮೇಶ್: ಭಾರತೀಯ ಜನತಾ ಪಾರ್ಟಿಯಲ್ಲಿ ತಮಗೆ ಎಲ್ಲ ಗೌರವಗಳನ್ನು ನೀಡಿದ್ದರೂ ಸಹ ಸಚಿವ ಸ್ಥಾನ ನೀಡಲಿಲ್ಲ ಎಂಬ ಏಕೈಕ ದುರುದ್ದೇಶದಿಂದ ತಾವು ಪಕ್ಷವನ್ನು ತ್ಯಜಿಸಿರುವ ಸತ್ಯದ ಬಗ್ಗೆ ಹಾಗೂ ಭಾರತೀಯ ಜನತಾ ಪಾರ್ಟಿಯಲ್ಲಿ ತಮಗೆ ಆದ ಅನ್ಯಾಯವಾದರೂ ಏನು ಎಂಬ ವಿಷಯಗಳ ಬಗ್ಗೆ ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದು ರಮೇಶ್ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಇದನ್ನೂ ಓದಿ: ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರದ ಯೋಜನೆ ಜಾರಿ; ಸಿಎಂ ರಾಜೀನಾಮೆ ನೀಡಲಿ: ಡಿಕೆಶಿ