ಬೆಂಗಳೂರು: ಪಕ್ಷೇತರನಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಮನೆ ಮೇಲೆ ಎರಡು ದಿನಗಳ ಹಿಂದೆಯಷ್ಟೇ ಐಟಿ ದಾಳಿ ನಡೆದಿತ್ತು. ಈ ಬೆನ್ನಲ್ಲೇ ಈಗ ಸಿಸಿಬಿ ಪೊಲೀಸರು, ಇಂದು ಆತನ ಮನೆಗೆ ತೆರಳಿ ನೊಟೀಸ್ ಜಾರಿ ಮಾಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ವೈಯಾಲಿ ಕಾವಲ್ನಲ್ಲಿರುವ ಅವರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಐಟಿ ದಾಳಿಯಾದ ಎರಡು ದಿನಗಳ ಅಂತರದಲ್ಲಿ ಗೋಡಂಬಿ ವಹಿವಾಟಿನಲ್ಲಿ ಅವ್ಯವಹಾರ ನಡೆಸಿದ ಆರೋಪದಡಿ ಸಿಸಿಬಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ರವಿ ಮನೆಗೆ ತೆರಳಿ ನೋಟಿಸ್ ನೀಡಿದ್ದಾರೆ. ಇದೇ ತಿಂಗಳು 25ರಂದು ವಿಚಾರಣೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ನೊಟೀಸ್ನಲ್ಲಿ ಉಲ್ಲೇಖವಾಗಿದೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ವೇಳೆ ರವಿಯ ಹೆಸರು ಕೇಳಿಬಂದಿತ್ತು. ಗೋಡಂಬಿ ವ್ಯವಹಾರದಲ್ಲಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸದ್ಯ ಆತನ ಮನೆಗೆ ತೆರಳಿ ನೋಟಿಸ್ ನೀಡಲಾಗಿದೆ.
ದಾಳಿ ಮಾಡಿಲ್ಲ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ- ಫೈಟರ್ ರವಿ: ಈ ಬಗ್ಗೆ ಪೈಟರ್ ರವಿ ಮಾಹಿತಿ ನೀಡಿದ್ದು, ’’ಸಿಸಿಬಿ ಪೊಲೀಸರು ದಾಳಿ ಮಾಡಿಲ್ಲ. ಬದಲಾಗಿ ನೊಟೀಸ್ ಕೊಟ್ಟಿದ್ದಾರೆ. ಯಾವ ಪ್ರಕರಣ ಎಂದು ನನಗೆ ಗೊತ್ತಿಲ್ಲ. 2023 ರಲ್ಲಿ ಯಾವುದೇ ಕೇಸ್ ಮಾಡಿಲ್ಲ. ಮೊನ್ನೆ ಐಟಿ ರೈಡ್ ಆಗಿತ್ತು. ಅದು ಅವರ ಕೆಲಸ, ಅವರು ಮಾಡಿದ್ದಾರೆ. ನಾನು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೋಗಿಲ್ಲ. ಅವರೇ ನನ್ನನ್ನ ಕರೆದೊಯ್ದಿದ್ದರು. ರಾಜಕೀಯ ಪ್ರೇರಿತ ಆಗಿರಬಹುದು ಎಂದಿದ್ದಾರೆ‘‘.
ವಿಚಾರಣೆ ಮಾಡಲಾಗಿದೆ, ದಾಳಿ ನಡೆದಿಲ್ಲ ಎಂದು ಡಿಸಿಪಿ ಸ್ಪಷ್ಟನೆ: ಕಳೆದ ಒಂದೂವರೆ ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ರವಿಯ ಹೆಸರು ಕೇಳಿಬಂದಿತ್ತು. ಗೋಡಂಬಿ ವ್ಯವಹಾರದಲ್ಲಿ ಆರೋಪ ಕೇಳಿ ಬಂದಿತ್ತು. ಇಂದು ಬೆಳಗ್ಗೆ ಆತನ ಮನೆಗೆ ತೆರಳಿ ವಿಚಾರಣೆ ನಡೆಸಲಾಗಿದ್ದು, ದಾಳಿ ನಡೆಸಿಲ್ಲ ಎಂದು ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಫೈಟರ್ ರವಿ ಮನೆ ಮೇಲೆ ಐಟಿ ದಾಳಿ